ಕಸ ವಿಲೇವಾರಿ ಘಟಕ ಸ್ಥಳಾಂತರಿಸಲು ಆವರಗೊಳ್ಳ ಜನತೆ ಆಗ್ರಹ

KannadaprabhaNewsNetwork |  
Published : May 14, 2024, 01:07 AM IST
ಕ್ಯಾಪ್ಷನಃ13ಕೆಡಿವಿಜಿ56, 57ಃಕಸ ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಒತ್ತಾಯಿಸಿ ದಾವಣಗೆರೆ ತಾ. ಆವರಗೊಳ್ಳ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಸ ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಒತ್ತಾಯಿಸಿ ದಾವಣಗೆರೆ ತಾಲೂಕಿನ ಆವರಗೊಳ್ಳ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾನಗರ ಪಾಲಿಕೆಯ ಕಸ ವಿಲೇವಾರಿ ಘಟಕದ ಸ್ಥಳಾಂತರಕ್ಕೆ ಒತ್ತಾಯಿಸಿ ದಾವಣಗೆರೆ ತಾಲೂಕಿನ ಆವರಗೊಳ್ಳ ಗ್ರಾಮಸ್ಥರು ಸೋಮವಾರ ಕೊಂಡಜ್ಜಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಕಸ ವಿಲೇವಾರಿ ಘಟಕ ತಕ್ಷಣವೇ ತೆರವು ಮಾಡುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.

ಗ್ರಾಮಕ್ಕೆ ಸಮೀಪದಲ್ಲೇ ಇರುವ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 10 ದಿನಗಳಾದರೂ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಲೇ ಇದೆ. ಪರಿಸ್ಥಿತಿ ತಹಬದಿಗೆ ಬಂದಿಲ್ಲದ ಕಾರಣ ಗ್ರಾಮದಲ್ಲಿ ದಟ್ಟ ಹೊಗೆ ಆವರಿಸಿ ಇಡೀ ಗ್ರಾಮವೇ ಗಬ್ಬು ನಾರುತ್ತಿದೆ. ಇದರಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಅಲ್ಲದೇ, ರೈತರು ಬೆಳೆದ ಬೆಳೆಗಳ ಮೇಲೆ ಬೂದಿ ಬೀಳುತ್ತಿದ್ದು, ಬೆಳೆ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ನಗರದಿಂದ ಕೂಗಳತೆ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ. ಆವರಗೊಳ್ಳ ಗ್ರಾಮಕ್ಕೆ ಸಮೀಪದಲ್ಲೇ 33 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕವಿದ್ದು, ಕಳೆದ 20 ವರ್ಷಗಳಿಂದ ಕಸ ನಿರ್ವಹಣೆ ಮಾಡಿಲ್ಲ ಎಂದು ಕಿಡಿಕಾರಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೋಡುತ್ತಿದ್ದೇವೆ. ಜಾಗ ಸಿಕ್ಕ ನಂತರ ಅಲ್ಲಿ ಕಸ ವಿಲೇವಾರಿ ಮಾಡಲಾಗುವುದು. ದಾವಣಗೆರೆ ನಗರದ ಎರಡು ಕಡೆ ಕಸ ವಿಲೇವಾರಿ ಘಟಕವಾದರೆ ಆವರಗೊಳ್ಳ ಗ್ರಾಮಕ್ಕೆ ಬರುವ ಕಸ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

ದಟ್ಟ ಹೊಗೆಯಿಂದ ಗ್ರಾಮಸ್ಥರು ಚರ್ಮರೋಗ, ಅಸ್ತಮಾಕ್ಕೆ ತುತ್ತಾಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ