ಅಕ್ಕಿರಾಂಪುರದಲ್ಲಿ ಇಬ್ಬರು ಸದಸ್ಯರ ರಾಜೀನಾಮೆ ಪರ್ವ

KannadaprabhaNewsNetwork | Published : Feb 5, 2025 12:33 AM

ಸಾರಾಂಶ

ಅಕ್ಕಿರಾಂಪುರ ಗ್ರಾಪಂಗೆ ೧೫ ದಿನಕ್ಕೊಮ್ಮೆ ಮಾತ್ರ ಪಿಡಿಒ ಬರ್ತಾರೆ. ಸಾಮಾನ್ಯ ಸಭೆ ಮಾಡದೆ ಪಿಡಿಒ ಮನೆಯ ಬಳಿ ಹೋಗಿ ಸದಸ್ಯರ ಸಹಿ ಪಡಿತಾರೆ. ಅನುದಾನದ ಲೆಕ್ಕಾ ಕೇಳಿದ್ರೆ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷೆ ಉಡಾಫೆ ಉತ್ತರ ನೀಡ್ತಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಅಕ್ಕಿರಾಂಪುರ ಗ್ರಾಪಂಗೆ ೧೫ ದಿನಕ್ಕೊಮ್ಮೆ ಮಾತ್ರ ಪಿಡಿಒ ಬರ್ತಾರೆ. ಸಾಮಾನ್ಯ ಸಭೆ ಮಾಡದೆ ಪಿಡಿಒ ಮನೆಯ ಬಳಿ ಹೋಗಿ ಸದಸ್ಯರ ಸಹಿ ಪಡಿತಾರೆ. ಅನುದಾನದ ಲೆಕ್ಕಾ ಕೇಳಿದ್ರೆ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷೆ ಉಡಾಫೆ ಉತ್ತರ ನೀಡ್ತಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂಯ ಮಧುಸೂಧನ್ ಮತ್ತು ಲೊಕೇಶ್ ಎಂಬ ಸದಸ್ಯರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧ್ಯಕ್ಷೆಯ ಪತಿ ನಾಗರಾಜು, ಪಿಡಿಒ ರವಿಕುಮಾರ್ ವಿರುದ್ದ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಗ್ರಾಪಂ ಕಚೇರಿ ಮುಂಭಾಗ ಸ್ಥಳೀಯರ ಜೊತೆಗೂಡಿ ಪ್ರತಿಭಟನೆ ನಡೆಸಿದರು.ಅಕ್ಕಿರಾಂಪುರ ಗ್ರಾಪಂ ಸದಸ್ಯ ಮಧುಸೂಧನ್ ಮಾತನಾಡಿ, ಗ್ರಾಪಂ ಸಾಮಾನ್ಯ ಸಭೆ ಮಾಡಿ ೬ ತಿಂಗಳಾಗಿದೆ. ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದ್ರೆ ಪಿಡಿಒ ಉಡಾಫೆ ಉತ್ತರ ನೀಡ್ತಾರೆ. ಜನರಿಗೆ ಉತ್ತರ ಕೊಡಲು ಆಗದೆ ರಾಜೀನಾಮೆ ಕೊಡುವಂತಹ ದುಸ್ಥಿತಿ ಬಂದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಸರ್ಕಾರದ ಕಾರ್ಯದರ್ಶಿ ಅತೀಕ್ ಅಹಮ್ಮದ್ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು. ಗ್ರಾಪಂ ಸದಸ್ಯ ಲೊಕೇಶ್ ಮಾತನಾಡಿ, ಪಿಡಿಒ ೧೫ ದಿನಕ್ಕೊಮ್ಮೆ ಮಾತ್ರ ಗ್ರಾಪಂಗೆ ಬರ್ತಾರೆ. ಜನರಿಗೆ ಸಮಸ್ಯೆ ಆದ್ರೆ ಕ್ಯಾಮೇನಹಳ್ಳಿಗೆ ಹೋಗ್ಬೇಕು. ಅಧ್ಯಕ್ಷೆಯ ಪತಿ ಮಾತು ಕೇಳಿ ಪಿಡಿಒ ನರೇಗಾ ಕ್ರಿಯಾ ಯೋಜನೆ ಮಾಡ್ತಾರೆ. ಪಿಡಿಒ ಮತ್ತು ಅಧ್ಯಕ್ಷರ ಬಗ್ಗೆ ಜಿಪಂ ಮತ್ತು ತಾಪಂಗೆ ದೂರು ನೀಡಿದ್ರು ಪ್ರಯೋಜನವಾಗಿಲ್ಲ. ಅದಕ್ಕಾಗಿಯೇ ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದರು.ಈ ನಡುವೆ ಸ್ಥಳಕ್ಕೆ ಬಂದ ತಾಪಂ ಇಒ ಅಪೂರ್ವ, ಪಿಡಿಒ ಮತ್ತು ಅಧ್ಯಕ್ಷರ ಬಗ್ಗೆ ಏನೇ ಸಮಸ್ಯೆ ಇದ್ರು ಲಿಖಿತ ರೂಪದಲ್ಲಿ ದೂರು ನೀಡಿದ್ರೆ ತ್ವರಿತವಾಗಿ ತನಿಖೆ ಮಾಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರು ಅವರ ವಿರುದ್ಧ ಕ್ರಮಕ್ಕೆ ಜಿಪಂ ಸಿಇಒಗೆ ಬರೆಯುತ್ತೇನೆ. ಪ್ರತಿಭಟನೆ ಮಾಡುವುದರಿಂದ ಸಮಸ್ಯೆ ಬಗೆಹರಿಯೋದಿಲ್ಲ. ಪ್ರತಿಭಟನೆ ಕೈಬಿಟ್ಟು ಕಚೇರಿಯ ಒಳಗೆ ಬನ್ನಿ ನಿಮ್ಮ ಸಮಸ್ಯೆ ಹೇಳಿ ಎಂದು ತಾಪಂ ಇಒ ಗ್ರಾಪಂ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದರು.

ಇನ್ನೂ ಈ ಕುರಿತು ಸ್ಪಷ್ಟನೆ ನೀಡಿದ ಪಿಡಿಒ ರವಿಕುಮಾರ್‌ ಅಕ್ಕಿರಾಂಪುರ ಮತ್ತು ಕ್ಯಾಮೇನಹಳ್ಳಿ ಗ್ರಾಪಂಯಲ್ಲಿ ಒತ್ತಡದ ನಡುವೆಯು ಜನರ ಕೆಲಸ ಮಾಡ್ತಿದ್ದೀನಿ. ಕಂದಾಯ ವಸೂಲಾತಿಯ ಹಳೆಯ ದಾಖಲಾತಿಯ ಬಗ್ಗೆ ನನಗೇನು ಗೊತ್ತಿಲ್ಲ. ಅಂಗಡಿ ಮಳಿಗೆ ಮತ್ತು ಸಂತೆ ಹರಾಜು ಪ್ರಕ್ರಿಯೆ ತ್ವರಿತವಾಗಿ ಆಗುತ್ತದೆ. ನನ್ನ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪಿಡಿಒ ರವಿಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.

10 ಲಕ್ಷಕ್ಕೂ ಅಧಿಕ ಹಣ ದುರುಪಯೋಗ: ಆರೋಪ

೨೦೨೦ರಿಂದ ೨೦೨೪ರ ವರೆಗಿನ ಕಂದಾಯ ವಸೂಲಾತಿ ಮಾಡಿರುವ ೯೦ ಪುಸ್ತಕಗಳು ಗ್ರಾಪಂನಲ್ಲಿ ಇಲ್ಲ. ೧೦ ಲಕ್ಷಕ್ಕೂ ಅಧಿಕ ತೆರಿಗೆ ಹಣ ದುರುಪಯೋಗ ಮತ್ತು ಅಂಗಡಿ ಮಳಿಗೆಯ ಜೊತೆ ಸಂತೆ ಹರಾಜಿನ ಠೇವಣಿ ಹಣವು ಕಾಣೆಯಾಗಿದೆ. ಗ್ರಾಪಂ ಸದಸ್ಯರು ದಾಖಲೆ ಬಗ್ಗೆ ಪ್ರಶ್ನಿಸಿದ್ರೆ ಮಾಹಿತಿ ಹಕ್ಕಿನಲ್ಲಿ ಪಡೆದುಕೊಳ್ಳಿ ಎನ್ನುತ್ತಾರೆ ಎಂದು ಗ್ರಾಮಸ್ಥರು ತಾಪಂ ಇಒ ಮುಂದೆ ದೂರು ಹೇಳಿದರು.

Share this article