ಚಾಮರಾಜನಗರದಲ್ಲಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ರಚನೆಗೆ ನಿರ್ಣಯ

KannadaprabhaNewsNetwork | Published : Oct 21, 2024 12:30 AM

ಸಾರಾಂಶ

ಪರಿಶಿಷ್ಟ ಜಾತಿ ರೈತರ ಸಮಸ್ಯೆಗಳು ಹಾಗೂ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವುದು ಮತ್ತು ಸರ್ಕಾರ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಪರಿಶಿಷ್ಟ ಜಾತಿ ರೈತ ಸಂಘ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ರಚನೆ ಮಾಡಿಕೊಳ್ಳಲು ಚಾಮರಾಜನಗರದಲ್ಲಿ ರೈತ ಮುಖಂಡರಿಂದ ನಿರ್ಣಯ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪರಿಶಿಷ್ಟ ಜಾತಿ ರೈತರ ಸಮಸ್ಯೆಗಳು ಹಾಗೂ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವುದು ಮತ್ತು ಸರ್ಕಾರ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಪರಿಶಿಷ್ಟ ಜಾತಿ ರೈತ ಸಂಘ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ರಚನೆ ಮಾಡಿಕೊಳ್ಳಲು ನಿರ್ಣಯ ಮಾಡಲಾಯಿತು. ತಾಲೂಕಿನ ದಡದಹಳ್ಳಿ ಡಾ.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳ ಯಜಮಾನರು, ಮುಖಂಡರ ಪೂರ್ವಭಾವಿ ಸಭೆ ಭಾನುವಾರ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಹಳಷ್ಟು ಮಂದಿ ಪರಿಶಿಷ್ಟ ಜಾತಿ ರೈತರು ಹಾಗೂ ಮುಖಂಡರು ಹಳ್ಳಿಯಿಂದ ದೆಹಲಿಯವರೆಗೆ ಪರಿಶಿಷ್ಟ ಜಾತಿ ರೈತರನ್ನು ಮೂಲ ರೈತ ಸಂಘಟನೆ ಕಡೆಗಣಿಸುತ್ತಲೇ ಬಂದಿದೆ. ರೈತ ಸಂಘ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬದಲು ಮೇಲ್ವರ್ಗದ ಸಂಘಟನೆಯಾಗಿದೆಯೇ ಹೊರತು ಪರಿಶಿಷ್ಟ ಜಾತಿ ಹಾಗೂ ಸಣ್ಣ ಹಿಡುವಳಿದಾರರ ರೈತರ ಸಮಸ್ಯೆಗಳಿಗೆ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯಲ್ಲಿ ಮಾತನಾಡಿದ ಸಿದ್ದಯ್ಯನಪುರ ಗೋವಿಂದರಾಜು, ಪರಿಶಿಷ್ಟ ಜಾತಿ ರೈತರ ಸಮಸ್ಯೆಯನ್ನು ರೈತ ಸಂಘ ಕೇಳುತ್ತಿಲ್ಲ. ಜೊತೆಗೆ ನಮ್ಮನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಸಹ ನೀಡುತ್ತಿಲ್ಲ. ಬೆಟ್ಟದಷ್ಟು ಪರಿಶಿಷ್ಟ ಜಾತಿ ರೈತರ ಸಮಸ್ಯೆಗಳಿದ್ದರು ಸಹ ಕಿಂಚಿತ್ತು ಇದರ ಬಗ್ಗೆ ಸರ್ಕಾರ ಹಾಗೂ ಅಧಿಕಾರಿ ಶಾಹಿಗಳ ಗಮನ ಸೆಳೆಯುವಲ್ಲಿ ರೈತ ಸಂಘ ವಿಫಲವಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ ರೈತ ಸಂಘವನ್ನು ರಚನೆ ಮಾಡಿಕೊಂಡು ನಮ್ಮ ಹೋರಾಟ ಆರಂಭಿಸೋಣ. ಡಾ.ಅಂಬೇಡ್ಕರ್ ನಮಗೆ ಸಂವಿಧಾನ ನೀಡುವ ಜೊತೆಗೆಶಿಕ್ಷಣ, ಸಂಘಟನೆ, ಹೋರಾಟವನ್ನು ಹೇಳಿಕೊಟ್ಟಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿ ರೈತ ಸಂಘವನ್ನು ಅಸ್ತಿತ್ವಕ್ಕೆ ತರುವುದು ಸೂಕ್ತವಾಗಿದೆ. ಚಂದಕವಾಡಿ ಭಾಗದ ಸುಮಾರು ೩೦ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಕಾಲೋನಿಗಳಿಂದ ರೈತರು ಮುಖಂಡರು ಆಗಮಿಸಿದ್ದೀರಿ. ನಿಮ್ಮ ಸಲಹೆ ಸೂಚನೆಗಳನ್ನು ನೀಡಿ, ಸಂಘ ರಚನೆಗೆ ಸಂಪೂರ್ಣ ಬೆಂಬಲ ಹಾಗು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಿದ್ದಯ್ಯನಪುರ ಗ್ರಾಮದ ಯಜಮಾನ ನಾಗರಾಜು ಮಾತನಾಡಿ, ರೈತರು ಎಂದರೆ ಜಾತಿ ಇಲ್ಲ. ನಾವೆಲ್ಲರು ರೈತರು. ನಮ್ಮದು ರೈತ ಜಾತಿ ಎಂಬ ಭಾವನೆಯನ್ನು ಹೊಂದಿದ್ದೆವು. ಆದರೆ, ಇತ್ತೀಚಿನ ದಿನಗಳ ನಡವಳಿಕೆ ಮತ್ತು ಪರಿಶಿಷ್ಟ ಜಾತಿ ರೈತರಿಗೆ ಆಗುತ್ತಿರುವ ಅನ್ಯಾಯಗಳು ಮತ್ತು ರೈತ ಸಂಘಗಳು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಬೇಸರವಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ಚಂದಕವಾಡಿ ಭಾಗದಲ್ಲಿ ಪರಿಶಿಷ್ಟ ಜಾತಿ ರೈತ ಸಂಘವನ್ನು ರಚನೆ ಮಾಡಿ, ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ನಮ್ಮ ಸಂಘಟನೆ ಬಲಗೊಳಿಸೋಣ. ನಮ್ಮ ಹಕ್ಕು ಪಡೆದುಕೊಳ್ಳಲು ಹೋರಾಟ ಮಾಡೋಣ. ಪರಿಶಿಷ್ಟ ಜಾತಿ ರೈತ ಸಂಘ ರಚನೆಗೆ ಸಿದ್ದಯ್ಯನಪುರ ಗ್ರಾಮಸ್ಥರ ಸಂಪೂರ್ಣ ಬೆಂಬಲವನ್ನು ಘೋಷಣೆ ಮಾಡಿದರು. ಸಭೆಯಲ್ಲಿ ಮಾತನಾಡಿದ ವಿವಿಧ ಗ್ರಾಮಗಳ ಮುಖಂಡರು ಇಂದಿನ ಸಭೆಯಲ್ಲಿಯೇ ಎಲ್ಲವನ್ನು ಪೂರ್ಣಗೊಳಿಸುವುದು ಸರಿಯಲ್ಲ. ಇನ್ನು ಅನೇಕ ಗ್ರಾಮಗಳಿಂದ ರೈತರು, ಮುಖಂಡರು ನಮ್ಮ ಸಭೆಗೆ ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಸಭೆಗೆ ಆಗಮಿಸಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಸಭೆ ಕರೆದು ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿ, ಈಗ ಆಗಮಿಸಿರುವ ಗ್ರಾಮಗಳಿಂದ ಸಂಘಟನೆಗಾಗಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಇನ್ನು ಒಂದು ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಘವನ್ನು ಅಸ್ತಿತ್ವಕ್ಕೆ ತರುವಂತೆ ತಿಳಿಸಿದರು. ಇದಕ್ಕೆ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು. ಅ.೨೬ರಂದು ಚಂದಕವಾಡಿಯಲ್ಲಿ ಸಭೆ:

ಪರಿಶಿಷ್ಟ ಜಾತಿ ರೈತ ಸಂಘ ಕರ್ನಾಟಕ ರಚನೆ ಕುರಿತು ಅ.೨೬ ರ ಶನಿವಾರ ಚಂದಕವಾಡಿಯ ಡಾ.ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ ೧೦.೩೦ಕ್ಕೆ ಸರಿಯಾಗಿ ಈ ಭಾಗದ ಪ್ರಮುಖರ ಸಭೆಯನ್ನು ಆಯೋಜನೆ ಮಾಡಲಾಗಿದೆ. ತಪ್ಪದೇ ಎಲ್ಲರು ಆಗಮಿಸಿ, ಸಂಘ ರಚನೆಗೆ ತಮ್ಮೆಲ್ಲರ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಡಾ.ಕೆ.ಶಿವಕುಮಾರ್ ಮನವಿ ಮಾಡಿದರು. ಸಭೆಯಲ್ಲಿ ಮುಖಂಡರಾದ ಆಲೂರು ಮಲ್ಲಣ್ಣ, ದಡದಹಳ್ಳಿ ಗೋವಿಂದರಾಜು, ಮಹದೇವಸ್ವಾಮಿ, ಮಹೇಶ್, ಕೆಂಪಣ್ಣ, ಶಿವಣ್ಣ, ಸಿ.ಎಸ್. ಮಹದೇವಸ್ವಾಮಿ, ಯ.ನಾಗರಾಜು, ಸೋಮಣ್ಣ, ಬಸವಣ್ಣ, ಶಿವಬಸಯ್ಯ, ಮಹದೇವಸ್ವಾಮಿ, ರಂಗಸ್ವಾಮಿ, ಪ್ರಭುಸ್ವಾಮಿ, ಕುಂಬಯ್ಯ, ನಾಗರಾಜು, ಮುದ್ದಮಲ್ಲಯ್ಯ, ಎಸ್.ಆರ್. ಗೋವಿಂದರಾಜು, ಕುಂಬೇಶ್ವರ ಸ್ವಾಮಿ, ಹೆಬ್ಬಸೂರು ಸೋಮಣ್ಣ, ಮರಿಸ್ವಾಮಿ, ಗೌತಮ ಕಾಲೋನಿಯ ಗುರುಸ್ವಾಮಿ, ಮಹದೇವಯ್ಯ, ಮಹದೇವಸ್ವಾಮಿ, ಮಂಜು ಸೇರಿದಂತೆ ಚಂದಕವಾಡಿ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಯಜಮಾನರು ಭಾಗವಹಿಸಿದ್ದರು.

Share this article