ಕೆ.ಆರ್. ನಗರ: ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ವಸೂಲಿಯಾಗದೆ ಆದಾಯಕ್ಕೆ ಕತ್ತರಿ ಬಿದ್ದು ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಲಕ್ಷಾಂತರ ರು. ತೆರಿಗೆ ವಿದಿಸುವ ಬದಲು ಪುರಸಭೆಯ ಕೆಲವು ಸಿಬ್ಬಂದಿ ಲಂಚ ಪಡೆದು ಕಡಿಮೆ ಕಂದಾಯ ನಿಗದಿ ಮಾಡುತ್ತಿರುವುದರಿಂದ ವಾರ್ಷಿಕ 5 ಕೋಟಿ ಸಂಗ್ರಹವಾಗಬೇಕಿದ್ದ ತೆರಿಗೆ ಈಗ 2.5 ಕೋಟಿ ವಸೂಲಿಯಾಗುತ್ತಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಸದಸ್ಯರುಗಳು ಇಂತಹ ಕೆಲಸಗಳು ಅಭಿವೃದ್ದಿಗೆ ಮಾರಕವಾಗಿದ್ದು, ಈ ವಿಚಾರವನ್ನು ಸಭೆಯು ಗಂಭೀರವಾಗಿ ಪರಿಗಣಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು.
ಅಧ್ಯಕ್ಷ ಶಿವುನಾಯಕ್ ಮಾತನಾಡಿ, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರಲ್ಲದೆ, ನಾಳೆಯಿಂದಲೇ ಕಂದಾಯ ವಿಭಾಗದವರು ಸರ್ಕಾರ ನಿಗದಿಪಡಿಸಿದ ತೆರಿಗೆ ವಸೂಲಿ ಮಾಡುವುದರ ಜತೆಗೆ ಆ ಸಂಬಂದ ನನಗೆ ವರದಿ ಮತ್ತು ದಾಖಲೆ ನೀಡುವುದರರೊಂದಿಗೆ ಕಡಿಮೆ ಕಂದಾಯ ಪಡೆದಿರುವವದರಿಂದ ಸರ್ಕಾರದ ನಿಯಮಾನುಸಾರ ವಸೂಲಿ ಮಾಡಬೇಕೆಂದು ಸೂಚಿಸಿದರು.ಪಟ್ಟಣದ 23 ವಾರ್ಡುಗಳಿಗೆ ನಿತ್ಯ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ, ಇದರಿಂದ ನಾಗರೀಕರಿಗೆ ತೊಂದರೆಯಾಗಿದ್ದು, ಇಂತಹ ವೈಫಲ್ಯದಿಂದ ಸಾರ್ವಜನಿಕರು ಪುರಸಭೆ ಆಡಳಿತ ವಿಫಲಗೊಂಡಿದೆ ಎಂದು ದೂರುತ್ತಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದು ಸದಸ್ಯರುಗಳು ಒಕ್ಕೊರಲಿನಿಂದ ಆಗ್ರಹ ಮಾಡಿದರು.
ಸದಸ್ಯರಾದ ಉಮೇಶ್, ಕೆ.ಬಿ. ವೀಣಾ, ಕೆ.ಜಿ. ಸುಬ್ರಹ್ಮಣ್ಯ, ಬಿ.ಎಸ್. ತೋಂಟದಾರ್ಯ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈ ಕಾಮಗಾರಿಯನ್ನು ತನಿಖೆಗೊಳಪಡಿಸಿ ಆನಂತರ ಬಿಲ್ ನೀಡಬೇಕೆಂದು ಹೇಳಿದರಲ್ಲದೆ, ತಪ್ಪೆಸಗಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ನುಡಿದರು.
ಸದಸ್ಯರಾದ ಸೈಯದ್ ಸಿದ್ದಿಕ್, ಕೆ.ಎಲ್.ಜಗದೀಶ್, ಶಂಕರ್‌ಸ್ವಾಮಿ, ಕೆ.ಜಿ. ಸುಬ್ರಹ್ಮಣ್ಯ, ನಟರಾಜು, ಬಿ.ಎಸ್. ತೋಂಟದಾರ್ಯ, ವಸಂತಮ್ಮ, ಅಶ್ವಿನಿಪುಟ್ಟರಾಜು, ಸರೋಜಮಹದೇವ್, ಶಂಕರ್, ಜಾವೀದ್ ಪಾಷಾ, ಕೆ.ಪಿ. ಪ್ರಭುಶಂಕರ್, ವಹೀದಾಬಾನು, ಸೌಮ್ಯ ಲೋಕೇಶ್, ಕೆ.ಬಿ. ವೀಣಾ ಮತ್ತು ಪುರಸಭೆ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.
ಶಾರದ ನಾಗೇಶ್ ಅವಿರೋದ ಆಯ್ಕೆಪುರಸಭೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ 9ನೇ ವಾರ್ಡಿನ ಸದಸ್ಯೆ ಶಾರದ ನಾಗೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರೊಂದಿಗೆ ಸದಸ್ಯರಾಗಿ ಅಶ್ವಿನಿ ಪುಟ್ಟರಾಜು, ಸರೋಜ ಮಹದೇವ್, ಕೆ.ಎಸ್. ಶಂಕರ್, ಸೌಮ್ಯ ಲೋಕೇಶ್ ಅವರು ನೇಮಕಗೊಂಡರು.