ಬೌದ್ಧ ಭಿಕ್ಕುಗಳಿಗೆ ಆಹ್ವಾನಿಸಲು ನಿರ್ಣಯ

KannadaprabhaNewsNetwork |  
Published : Apr 10, 2025, 01:02 AM IST
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ | Kannada Prabha

ಸಾರಾಂಶ

ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 14ರಂದು ನಡೆಯಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಲು ನಿರ್ಣಯ ಕೈಗೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 14ರಂದು ನಡೆಯಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಲು ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಬುಧವಾರ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಪ್ರತಿಮೆ ಅನಾವರಣವಾಗುತ್ತಿರುವುದು ವಿಶೇಷ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆಂಗಳೂರು ಹಾಗೂ ತುಮಕೂರಿನ ಬೌದ್ಧ ಭಿಕ್ಕುಗಳನ್ನು ಆಹ್ವಾನಿಸಬೇಕು ಎಂದು ಸೂಚಿಸಿದ ಅವರು, ಬೌದ್ಧ ಭಿಕ್ಕುಗಳ ವಸತಿ, ಊಟೋಪಚಾರ, ವಾಹನ ವ್ಯವಸ್ಥೆ, ಮೇಲುಸ್ತುವಾರಿಯನ್ನು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ವಹಿಸಿದರು. ಕೋವಿಡ್ ಹಾಗೂ ಚುನಾವಣೆ ನಿಮಿತ್ತ ಕಳೆದ 4 ವರ್ಷಗಳಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ನಗರದ ಟೌನ್‌ಹಾಲ್ ವೃತ್ತದಿಂದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಭಾವಚಿತ್ರದ ಮೆರವಣಿಗೆಯನ್ನು ಏರ್ಪಡಿಸಬೇಕು. ಮೆರವಣಿಗೆಯಲ್ಲಿ ಎಲ್ಲಾ ತಾಲೂಕಿನ ತಲಾ ಒಂದೊಂದು ಕಲಾವಿದರ ತಂಡ ಹಾಗೂ ರಾಜ್ಯ ಮಟ್ಟದ ಕಲಾವಿದರ ತಂಡ ಸೇರಿದಂತೆ ಒಟ್ಟು 21 ಕಲಾತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ, ನಾಸಿಕ್ ಡೋಲ್, ತಮಟೆ, ವಿವಿಧ ಕಲಾ ಪ್ರದರ್ಶನವನ್ನು ಏರ್ಪಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದರು. ಮೆರವಣಿಗೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಪಾಲಿಕೆ ಆವರಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರ ಆಸನ ವ್ಯವಸ್ಥೆ ಮಾಡಬೇಕೆಂದರಲ್ಲದೆ, ವೇದಿಕೆ ಸಜ್ಜು, ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಊಟೋಪಚಾರ, ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿತರಣೆ, ವಿವಿಧ ಸಾಧಕರಿಗೆ ಸನ್ಮಾನ, ನಗರದಾದ್ಯಂತ ದೀಪಾಲಂಕಾರ, ಮೆರವಣಿಗೆಗೆ ಆನೆಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮೆರವಣಿಗೆಗೆ ಸುಮಾರು 12 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದವರಿಗಾಗಿ ಎಂಪ್ರೆಸ್ ಕಾಲೇಜಿನ ಆವರಣ, ಸೇಂಟಮೇರಿಸ್ ಕಾಲೇಜು ಆವರಣ, ಸೆಂಟ್ರಲ್ ಲೈಬ್ರರಿ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿಗೆ ನಿರ್ದೇಶನ ನೀಡಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ನಗರ ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ, ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ