ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಬಹಿರಂಗ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಪೂರ್ಣಗೊಳಿಸುವುದು ಸೇರಿದಂತೆ 9 ಪ್ರಮುಖ ನಿರ್ಣಯ ಮಂಡಿಸಿ ನಿರ್ಣಯ ಅಂಗೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಬಾಗಲಕೋಟೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಬಹಿರಂಗ ಅಧಿವೇಶನದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಪೂರ್ಣಗೊಳಿಸುವುದು ಸೇರಿದಂತೆ 9 ಪ್ರಮುಖ ನಿರ್ಣಯ ಮಂಡಿಸಿ ನಿರ್ಣಯ ಅಂಗೀಕರಿಸಲಾಯಿತು.ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ ನಿರ್ಣಯ ಮಂಡಿಸಿದರು. ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಅನುಮೋದಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಮಾತನಾಡಿ, ಈ ಎಲ್ಲಾ ನಿರ್ಣಯಗಳನ್ನು ಕೇಂದ್ರ ಕಸಾಪ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಸಲ್ಲಿಸಲಾಗುವುದು ಎಂದರು.

ನಿರ್ಣಯಗಳು:

ರಾಷ್ಟ್ರೀಯ ಚಾಲುಕ್ಯ ಉತ್ಸವ ಇದೇ ವರ್ಷದಿಂದ ಆರಂಭಿಸಬೇಕು.

ಬಾಗಲಕೋಟೆ ನವನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಬೇಕು.

ಬಾದಾಮಿ, ಮುಧೋಳ ತಾಲೂಕಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕು ಕೇಂದ್ರಗಳಲ್ಲಿ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆ ನಡೆಸಲು ಕಸಾಪ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು.

ಆಲಮಟ್ಟಿ ಹಿನ್ನಿರಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು.

ಬಾಗಲಕೋಟೆ ಜಿಲ್ಲೆಯ ನೀರಾವರಿ ವಂಚಿತ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲವಾಗಿ ಈ ಪ್ರದೇಶದಲ್ಲಿರುವ ಎಲ್ಲಾ ಕೆರೆಗಳನ್ನು ಪುನರುಜ್ಜೀವನಗೊಳಿಸಿ ನೀರು ತುಂಬಿಸುವ ಯೋಜನೆ ತಕ್ಷಣ ಕಾರ್ಯರೂಪಕ್ಕೆ ತರಬೇಕು.

1 ರಿಂದ 5 ನೇ ತರಗತಿ ವರಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು. ಸಂಖ್ಯಾ ಕೊರತೆಯಿರುವ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚದಂತೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳಬೇಕು.

ಉತ್ತರ ಕರ್ನಾಟಕದ ಜನಪದ ಕಲಾವಿದರಿಗೆ ಸರ್ಕಾರಗಳು ಆಯೋಜಿಸುವ ರಾಜ್ಯ ಮತ್ತು ರಾಷ್ಟ್ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ನೀಡಬೇಕು.

Share this article