ಬಿಪಿಎಲ್‌ ಪಡಿತರದಾರರ ಸಮಸ್ಯೆ ಇತ್ಯರ್ಥ ಮಾಡಿ: ಅಶೋಕ ಮಂದಾಲಿ

KannadaprabhaNewsNetwork |  
Published : Dec 21, 2025, 03:15 AM IST
ಗದಗ ನಗರದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ನಡೆದ ಪಡಿತರ ಚೀಟಿ ವಿಶೇಷ ಸಭೆಯಲ್ಲಿ ಅಶೋಕ ಮಂದಾಲಿ ಮಾತನಾಡಿದರು. | Kannada Prabha

ಸಾರಾಂಶ

ಗದಗ ನಗರದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪಡಿತರ ಚೀಟಿ (ರೇಷನ್ ಕಾರ್ಡ್‌) ವಿಶೇಷ ಸಭೆ ನಡೆಯಿತು.

ಗದಗ: ಆದಷ್ಟು ಶೀಘ್ರ ಬಿಪಿಎಲ್ ಪಡಿತರದಾರರಿಗೆ ಎದುರಾಗುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಸೂಚಿಸಿದ್ದಾರೆ.

ನಗರದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಪಡಿತರ ಚೀಟಿ (ರೇಷನ್ ಕಾರ್ಡ್‌) ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಬಿಪಿಎಲ್‌ನಿಂದ ಎಪಿಎಲ್‌ ಆಗಿರುವ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅರ್ಹರ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಕಾರ್ಯ ಆರಂಭಿಸಬೇಕು. ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಅನ್ನ ಭಾಗ್ಯ ಯೋಜನೆ ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿಯೇ ತಲುಪುವಂತಾಗಲು ಸಂಬಂಧಿತ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಬೇಕು. ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾದವರನ್ನು ಗುರುತಿಸಿ ಪಟ್ಟಿ ಮಾಡಬೇಕು. ಎಎವೈ (ಅಂತ್ಯೋದಯ ಅನ್ನ ಯೋಜನಾ) ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾವಣೆಯಾಗಿರುವ ಪಡಿತರ ಚೀಟಿಗಳನ್ನು ಎಎವೈ, ಬಿಪಿಎಲ್‌ಗೆ ಬದಲಾಯಿಸಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ವಿವರಗಳಿಗಾಗಿ ತಹಸೀಲ್ದಾರ್‌ ಕಚೇರಿ ಆಹಾರ ವಿಭಾಗ ಹಾಗೂ ಗದಗ-ಬೆಟಗೇರಿ ನಗರದಲ್ಲಿ ಬರುವ ಪಡಿತರ ಚೀಟಿಗಳ ಮಾಹಿತಿಗಾಗಿ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರವಿರುವ ಸಹಾಯಕ ನಿರ್ದೇಶಕ ಕಾರ್ಯಾಲಯ ಸಂಪರ್ಕಿಸಬಹುದಾಗಿದೆ ಎಂದರು.

ತಾಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ಗದಗ ಮತಕ್ಷೇತ್ರದಲ್ಲಿರುವ ಬಡತನದಲ್ಲಿರುವ ಕುಟುಂಬದವರನ್ನು ಗುರುತಿಸಿ ಪಟ್ಟಿ ಮಾಡಿ, ಅವರಿಗೆ ಬಿಪಿಎಲ್ ಕಾರ್ಡ್‌ ಮಂಜೂರು ಮಾಡಬೇಕು. ಬಿಪಿಎಲ್ ಕಾರ್ಡ್‌ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ಸೂಕ್ತ ಪರಿಶೀಲನೆ ನಡೆಸಿ ನಿಗದಿತ ಅವಧಿಯಲ್ಲಿಯೇ ವಿಲೇವಾರಿ ಮಾಡಿ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಸಮಿತಿ ಸದಸ್ಯರಾದ ಸಾವಿತ್ರಿ ಹೂಗಾರ, ಮಲ್ಲು ಬಾರಕೇರ, ಸಂಗಮೇಶ ಕರಕಲಮಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಇದ್ದರು.

ಅಗತ್ಯ ದಾಖಲೆಗಳು: ಏಪ್ರಿಲ್-2022ರಿಂದ 2025ರ ವರೆಗೆ (3 ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್) ಕುಟುಂಬದಲ್ಲಿ ಯಾರಾದರೂ ಸರ್ಕಾರಿ, ಅರೆ ಸರ್ಕಾರಿ, ಸಂಸ್ಥೆ, ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕುಟುಂಬ ಸದಸ್ಯರ ಜಿಎಸ್‌ಟಿ, ಇನ್‌ಕಮ್ ಟ್ಯಾಕ್ಸ್ ತುಂಬುವ ಬಗ್ಗೆ ಮಾಹಿತಿ, ಕುಟುಂಬಕ್ಕೆ ಇರುವ ಜಮೀನಿನ ಮಾಹಿತಿ (7 ಎಕರೆ 20 ಗುಂಟೆ ಒಳಗೆ ಇರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಖಾತೆ ಉತಾರ), ರೇಶನ್ ಕಾರ್ಡ್‌ ನಕಲು ಪ್ರತಿ, ಕುಟುಂಬದ ಎಲ್ಲರ ಆಧಾರ್‌ ಕಾರ್ಡ್‌ ನಕಲು ಪ್ರತಿ, ಎಲ್ಲ ದಾಖಲಾತಿಗಳನ್ನು ನೇರವಾಗಿ ಪಡಿತರ ಚೀಟಿದಾರರು ಲಿಖಿತವಾಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಸೀಲ್ದಾರ್‌ ಕಚೇರಿಯಲ್ಲಿ ಇರುವ ಆಹಾರ ವಿಭಾಗಕ್ಕೆ ಭೇಟಿ ನೀಡಬೇಕು. ಗದಗ-ಬೆಟಗೇರಿ ಶಹರದಲ್ಲಿ ಬರುವ ಪಡಿತರ ಚೀಟಿಗಳ ಮಾಹಿತಿಗಾಗಿ ಗದಗ-ಬೆಟಗೇರಿ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರ ಇರುವ ಸಹಾಯಕ ನಿರ್ದೇಶಕ ಕಾರ್ಯಾಲಯಕ್ಕೆ ಭೇಟಿ ನೀಡಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ