ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ಸಭೆಯಲ್ಲಿ ಸಂಚಾರ ಸಮಸ್ಯೆ ಕುರಿತು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಖಾರವಾಗಿ ಮಾತನಾಡಿದ್ದಾರೆ.
ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹರಿಸಲು ಕಾರ್ಯಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೊದಲು ಎಸಿ ಕೊಠಡಿ ಬಿಟ್ಟು ಹೊರಬಂದು ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು. ಇದೇ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ನಗರದ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ರಸ್ತೆಗಿಳಿದು ಕಾರ್ಯನಿರ್ವಹಿಸಬೇಕು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪಿಕ್ ಆವರ್‌ನಲ್ಲಿ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಕನಿಷ್ಟ ಎರಡು ತಾಸಾದರೂ ರಸ್ತೆಯಲ್ಲಿ ನಿಂತು ಕೆಲಸ ಮಾಡಬೇಕು ಎಂದರು.ನಾನು ಅನೇಕ ಸಲ ಖಾಸಗಿ ಕಾರಿನಲ್ಲಿ ಸಂಚರಿಸುವಾಗ ಪೊಲೀಸರ ಕಾರ್ಯನಿರ್ವಹಣೆಯನ್ನು ಗಮನಿಸಿದ್ದೇನೆ. ಬಹುತೇಕ ಸಮಯ ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡುವುದು ಕಾಣಿಸುವುದೇ ಇಲ್ಲ. ಇನ್ನಾದರೂ ಕಚೇರಿಗಳಿಂದ ಹೊರಬಂದು ಕಾರ್ಯನಿರ್ವಹಿಸದೆ ಹೋದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಸಿದರು. ಹೆದ್ದಾರಿ ಗಸ್ತು ವಾಹನಗಳು ಹೆದ್ದಾರಿಗಳಲ್ಲಿ ಎಲ್ಲಿರುತ್ತವೇ ಎಂಬುದೇ ಕಾಣಿಸುವುದಿಲ್ಲ. ಈ ವಾಹನಗಳನ್ನು ಗಣ್ಯರ ಭದ್ರತೆಗೆ ಮುಂಗಾವಲು ವಾಹನಗಳಾಗಿ ಬಳಸಿಕೊಳ್ಳುವುದು ಬೇಡ. ರಸ್ತೆ ಬದಿ ಕೆಟ್ಟು ನಿಂತಿರುವ ವಾಹನಗಳನ್ನು ಕೂಡಲೇ ತೆರವುಗೊಳಿಸುವ ಕೆಲಸವಾಗಬೇಕು. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಗೃಹ ಸಚಿವರು ಸೂಚಿಸಿದರು.
ಪೊಲೀಸರನ್ನು ಆರ್ಡಲಿಗಳಾಗಿ ನೇಮಿಸಬೇಡಿ: ಪರಂಕೆಳಹಂತದ ಪೊಲೀಸರನ್ನು ತಮ್ಮ ಆರ್ಡಲಿಗಳನ್ನಾಗಿ ಹಿರಿಯ ಅಧಿಕಾರಿಗಳು ನೇಮಿಸಿಕೊಳ್ಳುವುದು ಸರಿಯಲ್ಲ. ಇಲಾಖೆಗೆ ಸೇವೆ ಸಲ್ಲಿಸು ಕನಸು ಹೊತ್ತು ಬರುವವರಿಗೆ ತಮ್ಮ ಸೇವೆಗೆ ನಿಯೋಜಿಸುವುದೆಷ್ಟು ಸರಿ ಎಂದು ಗೃಹ ಸಚಿವರು ಖಾರವಾಗಿ ಪ್ರಶ್ನಿಸಿದ್ದಾರೆ. ಪೊಲೀಸಿಂಗ್ ತರಬೇತಿ ಪಡೆದು ಇಲಾಖೆಯ ಕರ್ತವ್ಯಕ್ಕೆ ಸೇರಿದವರನ್ನು ಮನೆಯ ಕೆಲಸಗಳಿಗೆ ಬಳಸಿಕೊಳ್ಳಬೇಕೇ? ಕೆಳಹಂತದ ಸಿಬ್ಬಂದಿ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು. ಕೆಳಹಂತದ ಸಿಬ್ಬಂದಿಯಲ್ಲಿರುವ ಕ್ರಿಯಾಶೀಲತೆ, ಕೌಶಲ್ಯವನ್ನು ಇಲಾಖೆಯ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಪರಮೇಶ್ವರ್ ಸಲಹೆ ನೀಡಿದರು.