ರೋಣ: ಆಧುನಿಕ ಕಾಲದಲ್ಲಿ ಕಣ್ಮರೆಯಾಗುತ್ತಿರುವ ಕೆಲವೊಂದು ಸಂಪ್ರದಾಯಗಳು ಮಧ್ಯೆ ಶ್ರಾವಣ ಮಾಸದ ಭಜನೆಯೂ ಒಂದು. ಆದರೆ ರೋಣ ಪಟ್ಟಣದಲ್ಲಿ ಭಜನಾ ಪದಗಳ ಜೀವಂತವಾಗಿದ್ದು, ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪೂಜೆ, ಅಭಿಷೇಕದ ಜತೆಗೆ ಒಂದು ತಿಂಗಳ ನಿರಂತರ ಪಟ್ಟಣದ ವಿವಿಧ ಬಡಾವಣೆಗಳ ಭಜನಾ ತಂಡಗಳಿಂದ ಶ್ರಾವಣ ಮಾಸದ ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಗದುಗಿನ ಪಂ. ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯಲ್ಲಿ ಸಂಗೀತ ವಿದ್ಯಾಭ್ಯಾಸ ಮಾಡಿಕೊಂಡು ಬಂದ ರೋಣ ಪಟ್ಟಣದ ವ್ಯಕ್ತಿಯೊಬ್ಬ ಹಾಕಿಕೊಟ್ಟ ಮಾರ್ಗದಲ್ಲಿ ಮೌನೇಶ್ವರ ಭಜನಾ ತಂಡ ಹಾಗೂ ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ರೋಣ ಪಟ್ಟಣದಲ್ಲಿ ಲಕ್ಷ್ಮಿ ಗುಡಿ ಭಜನಾ ತಂಡ, ಯಾದವಾಡ ಬಸವೇಶ್ವರ, ಮಲ್ಲಿಕಾರ್ಜುನ ಭಜನಾ ತಂಡ, ಸಿದ್ಧಾರೂಢ ಭಜನಾ ತಂಡ, ದುರ್ಗಾದೇವಿ, ಬಸವೇಶ್ವರ ಭಜನಾ ತಂಡ ಸೇರಿದಂತೆ ಹಲವು ಭಜನಾ ತಂಡಗಳು ಸಕ್ರಿಯವಾಗಿವೆ. ಎಲ್ಲ ತಂಡದವರು ಆಯಾ ದೇವಸ್ಥಾನಗಳಲ್ಲಿ ನಿತ್ಯ ಭಜನಾ ಕಾರ್ಯಕ್ರಮ ನೀಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಸರ್ವಧರ್ಮದವರು ಸೌಹಾರ್ದದಿಂದ ಬದುಕುತ್ತಿದ್ದೇವೆ, ಭಜನೆ, ಜಾತ್ರೆ ಮುಂತಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುತ್ತಾರೆ ಎನ್ನುತ್ತಾರೆ ಮೌನೇಶ್ವರ ಭಜನಾ ತಂಡದ ಮುಖ್ಯಸ್ಥ ಸಿದ್ದಣ್ಣ ನವಲಗುಂದ.15ರಿಂದ 20 ಜನರ ಭಜನಾ ತಂಡ ಪಟ್ಟಣದಲ್ಲಿ ಸಂಚರಿಸುತ್ತದೆ. ನಿತ್ಯ ಬೆಳಗ್ಗೆ, ಸಂಜೆ ಎರಡು ಹೊತ್ತು ಭಜನಾ ಪದಗಳನ್ನು ಹಾಡಲಾಗುತ್ತದೆ. ತಂಡದ ಸದಸ್ಯರ ಕೈಯಲ್ಲಿ ತಾಳ, ತಬಲಾ, ಹಾರ್ಮೋನಿಯಂ ವಿವಿಧ ವಾದ್ಯಗಳೊಂದಿಗೆ ಬಸವೇಶ್ವರ, ಮಾರುತೇಶ್ವರ, ಸಿದ್ಧಾರೂಢ, ದುರ್ಗಾದೇವಿ ಮುಂತಾದ ದೇವರ ಭಾವಚಿತ್ರದೊಂದಿಗೆ ದೇವರ ನಾಮಗಳು, ಭಕ್ತಿಗೀತೆಗಳನ್ನು ಹಾಡುತ್ತಾ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಹಾಕುತ್ತಾರೆ.
ಆರೋಗ್ಯ ವೃದ್ಧಿಗೆ ಸಹಕಾರಿ: ಆಧುನಿಕ ಕಾಲದಲ್ಲಿ ಕೆಲವೊಂದು ಗ್ರಾಮೀಣ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ ನಮ್ಮ ಪಟ್ಟಣದಲ್ಲಿ ಭಜನಾ ತಂಡಗಳು ಜೀವಂತವಾಗಿವೆ. ಭಜನಾ ಪದ ಹಾಡುವುದರಿಂದ ಆರೋಗ್ಯ ವೃದ್ಧಿ ಜತೆಗೆ ಸಂಸ್ಕಾರ ಬೆಳೆಯುತ್ತದೆ. ರೋಣದಲ್ಲಿ ಭಜನಾ ಕೈಂಕರ್ಯ ಪ್ರಾರಂಭಗೊಳ್ಳಲು ಭಜನಿ ನಾಗಯ್ಯ, ಯಂಕಪ್ಪ ಕರಲಿಂಗಣ್ಣವರ, ಹಡಪದ ಸಿದ್ದಲಿಂಗಪ್ಪ ಮಾಸ್ತರ, ಪಂಚಾಕ್ಷರಿ ಗವಾಯಿಗಳ ಶಿಷ್ಯರಾದ ಚನ್ನಮಲ್ಲಯ್ಯನವರು, ಮರಿಯಪ್ಪ ರೋಣದ, ವೀರಭದ್ರಪ್ಪ ಬೆಳವಣಿಕೆ ಮಾಸ್ತರ, ಮುದ್ದಪ್ಪ ನವಲಗುಂದ, ಅಂಬಾಸಪ್ಪ ಹಕಾರಿ, ಬಸಪ್ಪ ಬ್ಯಾಳಿ, ಬಸಪ್ಪ ಪಲ್ಲೇದ, ಪರಪ್ಪ ಇಟಗಿ ಭಜನಾ ಕಲಾವಿದರು ಸೇರಿದಂತೆ ಭಜನಾ ಪದಗಳು ಉಳಿಸಿ, ಮುಂದಿನ ಪೀಳಿಗೆಗೆ ಭಜನಾ ಪದಗಳ ಮಹತ್ವ ತಿಳಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಯಾದವಾಡ ಬಸವೇಶ್ವರ ಸಂಘ ಭಜನಾ ಸಂಘದ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ.