ಕಾನೂನಿಗೆ ಗೌರವ, ಪಾಲನೆ ಪ್ರತಿಯೊಬ್ಬರ ಹೊಣೆ: ರಾಜೇಂದ್ರ

KannadaprabhaNewsNetwork |  
Published : Jun 06, 2025, 01:34 AM IST
ಫೋಟೋ: 5ಪಿಟಿಆರ್‌-ಸಭೆಶಾಂತಿ ಸಭೆಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಗುರುವಾರ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕಾನೂನು ಗೌರವಿಸುವುದು ಮತ್ತು ಪಾಲನೆ ಮಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಸ್ವಾತಂತ್ರ್ಯದ ಪರಿಪಾಲನೆಯಾಗಬೇಕು ಹೊರತು ಸ್ವಾತಂತ್ರ್ಯವನ್ನು ಮೀರಿದ ವರ್ತನೆ ಸರಿಯಲ್ಲ. ಯಾರೂ ಕಾನೂನು ಮೀರುವ ಕೆಲಸ ಮಾಡಬಾರದು ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಗುರುವಾರ ಪುತ್ತೂರಿನ ಪುರಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಡ್ರಗ್ಸ್ ಸೇವನೆ ಮತ್ತು ಸಾಮಾಜಿಕ ಜಾಲತಾಣದ ಕಾರಣದಿಂದಾಗಿ ತೊಂದರೆಯಾಗುತ್ತಿದೆ. ಇದನ್ನು ತಡೆಯುವುದು ಕೇವಲ ಪೊಲೀಸರ ಮಾತ್ರ ಜವಾಬ್ದಾರಿಯಲ್ಲ. ಹೆತ್ತವರಿಗೆ ಮತ್ತು ಸಾರ್ವಜನಿಕರಿಗೂ ಈ ಬಗ್ಗೆ ಜವಾಬ್ದಾರಿಯಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮುಂದುವರಿದಲ್ಲಿ ಸಮಾಜದಲ್ಲಿ ಯಾವುದೇ ಅಶಾಂತಿ ಹರಡಲು ಸಾಧ್ಯವಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಸಾರ್ವಜನಿಕರದ್ದು ಇದೆ. ಸಾಮಾಜಿಕ ಜಾಲತಾಣ ಸಹಿತ ವಿವಿಧ ಮಾಧ್ಯಮಗಳ ಬಳಕೆಯ ಸಂದರ್ಭದಲ್ಲಿಯು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು.ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಮಾತನಾಡಿ, ಪರಸ್ಪರ ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗದಂತೆ ವರ್ತನೆ ಇರಬೇಕು. ಅಹಿತಕರ ಘಟನೆ ನಡೆದ ಸಂದರ್ಭ ಪೊಲೀಸ್ ಇಲಾಖೆಯು ಮುಲಾಜು ಇಲ್ಲದೆ ಅದನ್ನು ಹತ್ತಿಕ್ಕುವ, ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತದೆ. ಗಾಳಿ ಸುದ್ದಿಗಳಿಗೆ ಮಾನ್ಯತೆ ನೀಡದೆ ಸಮಾಜದಲ್ಲಿ ಸೌರ್ಹಾದತೆಯನ್ನು ಕಾಪಾಡಿಕೊಳ್ಳುವ ಕಾರ್ಯ ಮಾಡಬೇಕು. ಅಹಿತಕರ ಘಟನೆ ಕಂಡು ಬಂದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡದೆ ನಮ್ಮ ಗಮನಕ್ಕೆ ತನ್ನಿ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಹಬ್ಬ ಅನ್ನುವುದು ಇಡೀ ಮಾನವ ಕುಲಕ್ಕೆ ಅನ್ನುವ ಚಿಂತನೆ ನಮ್ಮಲ್ಲಿ ಇರಬೇಕು. ಜಾತಿ, ಧರ್ಮ ಅನ್ನುವುದು ನಂತರ. ಮೊದಲು ನಾವು ಭಾರತೀಯರು. ಧರ್ಮ ಹೆಸರಿನಲ್ಲಿ ಪರಸ್ಪರ ಟೀಕೆ, ದೂಷಣೆ, ಸಾಮಾಜಿಕ ಜಾಲತಾಣದಲ್ಲಿ ಉತ್ತರ-ಪ್ರತ್ಯುತ್ತರ ಮಾಡುವ ಬದಲು ನಾವೆಲ್ಲರೂ ಒಂದಾಗಿ ಜೀವಿಸಲು ಸರ್ವ ಧರ್ಮದ ಹಬ್ಬಗಳು ಪ್ರೇರಣೆಯಾಗಬೇಕು ಎಂದರು.ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ದಶಕಗಳ ಹಿಂದೆ ಎಲ್ಲ ಹಬ್ಬಗಳಲ್ಲಿ ಸರ್ವಧರ್ಮಿಯರು ಪಾಲ್ಗೊಳ್ಳುವ ವಾತಾವರಣ ಇತ್ತು. ಆದರೆ ಕೆಲ ವರ್ಷಗಳಿಂದ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ವಾತಾವರಣ ಕಂಡು ಬರುತ್ತಿರುವುದು ನೋವಿನ ಸಂಗತಿ ಎಂದರು.ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಡ್ರಗ್ಸ್ ಮತ್ತು ಸಾಮಾಜಿಕ ಜಾಲತಾಣದ ನಿಯಂತ್ರಣದಿಂದ ಸಾಮಾಜಿಕ ಅಶಾಂತಿ ತಡೆಯಬಹುದು ಎಂದರು.

ಎಸ್‌ಡಿಪಿಐ ಮುಖಂಡ ಅಬ್ದುಲ್ ಸಿದ್ದಿಕ್ ಕೆ.ಎ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ರಜಾಕ್ ಬಪ್ಪಳಿಗೆ, ಮೌರೀಸ್ ಮಸ್ಕರೇನ್ಹಸ್ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ವರ್ತಕರ ಸಂಘದ ಎಂ.ಜಿ. ರಫೀಕ್, ಅಬ್ದುಲ್ ಹಮೀದ್ ಸಾಲ್ಮರ, ರಫೀಕ್ ಸವಣೂರು, ಅಶ್ರಫ್ ಕಲ್ಲೇಗ ಮತ್ತಿತರ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಮಹಿಳಾ ಠಾಣಾ ಎಸ್‌ಐ ಸುನೀಲ್ ಕುಮಾರ್ ಇದ್ದರು. ಪುತ್ತೂರು, ಸುಳ್ಯ, ಕಡಬ, ಬೆಳ್ಳಾರೆ ಸಹಿತ ವಿವಿಧ ಠಾಣಾ ಪೊಲೀಸರು ಉಪಸ್ಥಿತರಿದ್ದರು. ಪುತ್ತೂರು ನಗರ ಠಾಣಾ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಸ್ವಾಗತಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ