ಹಗರಿಬೊಮ್ಮನಹಳ್ಳಿ: ನಗರ ಪ್ರದೇಶಗಳಲ್ಲಿ ಪೌರಕಾರ್ಮಿಕರು ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಅತ್ಯಂತ ಗೌರವದಿಂದ ಕಾಣಬೇಕು ಎಂದು ಶಾಸಕ ಕೆ.ನೇಮರಾಜ ನಾಯ್ಕ ಹೇಳಿದರು.
ಪೌರ ಕಾರ್ಮಿಕರು ತಮ್ಮ ಕೆಲಸದ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯದತ್ತ ಚಿತ್ತ ಹರಿಸಬೇಕು. ಪ್ರಧಾನಿ ನರೇಂದ್ರ ಮೋದಿ ದೇಶದ ಸ್ವಚ್ಛತೆಗೆ ಮುನ್ನುಡಿ ಬರೆದಿದ್ದಾರೆ. ಪೌರ ಕಾರ್ಮಿಕರ ಸೇವೆಯನ್ನು ಸರ್ಕಾರಗಳು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆಯನ್ನು ಪಕ್ಷತೀತವಾಗಿ ಎಲ್ಲ ಸದಸ್ಯರ ಸಹಯೋಗದೊಂದಿಗೆ ಅಭಿವೃದ್ಧಿ ಮತ್ತು ಸ್ವಚ್ಛತೆಯಲ್ಲಿ ರಾಜ್ಯದ ಭೂಪಟದಲ್ಲಿ ಗುರುತಿಸುವಂತೆ ಮಾಡಲಾಗುವುದು. ಈ ಹಿಂದೆ ೫೫ ಸದಸ್ಯರನ್ನು ಹೊಂದಿದ್ದ ಗ್ರಾಪಂನ್ನು ಹಿಂದಿನ ಶಾಸಕ ಎಸ್.ಭೀಮನಾಯ್ಕ ಅವರ ಇಚ್ಛಾಶಕ್ತಿಯ ಫಲವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿದೆ ಎಂದರು.ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಈ ಹಿಂದಿನ ಶಾಸಕರು ಅನುದಾನ ಒದಗಿಸಿದ್ದರು. ಆದರೆ ಇಂದಿಗೂ ಕಟ್ಟಡ ನಿರ್ಮಾಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪೌರಕಾರ್ಮಿಕರು ಸ್ವಚ್ಛತಾ ಸೇವೆ ಅನನ್ಯವಾಗಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸೇವೆ ಗುಣಮಟ್ಟವನ್ನು ಹೆಚ್ಚಿಸಲಾಗುವುದು ಎಂದರು.
ಪಟ್ಟಣದ ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಒಂದೇ ತೆರನಾದ ಉಡುಪುಗಳನ್ನು ಧರಿಸಿ ಗಮನಸೆಳೆದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರುಗಳು, ಪುರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ, ಮಾರೆಣ್ಣ, ಬಸವರಾಜ, ನಾಗರತ್ನ ನಿರ್ವಹಿಸಿದರು.