ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ವೀರಶೈವ ಕಲ್ಯಾಣಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ನೂರಾರು ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಹಲವು ಮಂದಿ ಗಣ್ಯರು ಹಾಜರಿದ್ದು, ಸೀರೆ ವಿತರಿಸುವ ಮೂಲಕ ಗೌರವಿಸಿದರು.
ವೇದಿಕೆಯಲ್ಲಿ ಬಾಗಿನ ಸ್ವೀಕರಿಸಿ ಮಾತನಾಡಿದ ಮಹಿಳಾ ಪೌರ ಕಾರ್ಮಿಕರಾದ ನೇತ್ರಾವತಿ, ಸೀರೆ ಕೊಟ್ಟು ಬಾಗಿನ ನೀಡುವ ಮೂಲಕ ನಮ್ಮನ್ನು ಸಹೋದರಿಯರಂತೆ ಕಾಣುವ ಶ್ರೀಕಾಂತ್ ಅವರು ಇಂತಹದೊಂದು ಪುಣ್ಯದ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಬರುವ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ದೊಡ್ಡ ಶಕ್ತಿ ಸಿಗಲಿ, ಅಧಿಕಾರದಲ್ಲಿದ್ದಾಗ ಅವರು ಇನ್ನಷ್ಟು ಸಂತಸದಿಂದ ಬಾಗಿನ ನೀಡಲಿ ಎಂದು ಮಹಿಳಾ ಪೌರಕಾರ್ಮಿಕರಾದ ಗಂಗಮ್ಮ ಹಾರೈಸಿದರು.
ವೀರ ಶೈವ ಸಮಾಜದ ಮುಖಂಡ ಮಹೇಶ್ವರಪ್ಪ ಮಾತನಾಡಿ, ಮುಖಂಡರಾದ ಶ್ರೀಕಾಂತ್ ಅವರು ಅಧಿಕಾರ ಇರಲಿ, ಇಲ್ಲದಿರಲಿ ಅವರು ಸಾಮಾಜಿಕ ಸೇವೆಯನ್ನು ಎಂದಿಗೂ ಮರೆತಿಲ್ಲ, ಅವರಿಗೆ ರಾಜಕೀಯವಾಗಿ ಒಳ್ಳೆಯದಾಗಲಿ ಎಂದರು.
ವೇದಿಕೆಯಲ್ಲಿ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯೆ ನಿರ್ಮಲ ಕಾಶಿ, ಪಾಲಿಕೆಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯೆ ಗಾಡಿಕೊಪ್ಪ ರಾಜಣ್ಣ, ಪೌರ ಕಾರ್ಮಿಕರ ಸಂಘದ ಮುಖಂಡರಾದ ಪ್ರಕಾಶ್, ಕುಮಾರ್, ಮಂಜುನಾಥ್ ,ಪಾಲಿಕೆ ಆರೋಗ್ಯಾಧಿಕಾರಿ ವೇಣುಗೋಪಾಲ್ ಸೇರಿ ಹಲವರು ಇದ್ದರು.