ದಾಬಸ್‍ಪೇಟೆ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ನಿವೃತ್ತ ಶಿಕ್ಷಕಿ ಆಶಾದೇವಿ ತಿಳಿಸಿದರು. ಸೋಂಪುರ ಹೋಬಳಿಯ ಮಣ್ಣೆ ಸರ್ಕಾರಿ ಪ್ರೌಢಶಾಲೆಯ 2006-07ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 20 ವರ್ಷಗಳ ಹಿಂದೆ ತಾವು ಕಲಿತ ಶಾಲೆ ಹಾಗೂ ಗುರುಗಳನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ಮೆಲುಕು ಹಾಕಲು ಹಾಗೂ 20 ವರ್ಷಗಳ ನಂತರ ಜೀವನಕ್ಕೆ ಆದರ್ಶ ಮಾರ್ಗ ತೋರಿಸಿದ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ನಿವೃತ್ತ ಶಿಕ್ಷಕ ಗೋವಿಂದರಾಜು ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮಗೆ ಪಾಠ ಕಲಿಸಿದ ಎಲ್ಲಾ ಶಿಕ್ಷಕರನ್ನು ಒಂದೇಡೆ ಸೇರಿಸಿ ಗುರುವಂದನೆ ಸಲ್ಲಿಸುತ್ತಿರುವ ಕಾರ್ಯ ಮೆಚ್ಚವಂತಹದ್ದು ಎಂದರು. ಈ ಸಂದರ್ಭದಲ್ಲಿ 2006-2007ನೇ ಸಾಲಿನ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕರಾದ ವೃಂದಮ್ಮ, ರಾಜಣ್ಣ, ಶ್ರೀಧರ್, ಶಿವಕುಮಾರ್, ಸಿದ್ದೇಶ್ವರಪ್ಪ, ಶಾಂತಯ್ಯ, ಕುಮರೇಶಿ, ಮಂಜುನಾಥ್ ಅವರನ್ನು ಸನ್ಮಾನಿಸಿದರು.
ಸೋಂಪುರ ಹೋಬಳಿಯ ಮಣ್ಣೆ ಸರ್ಕಾರಿ ಪ್ರೌಢಶಾಲೆಯ 2006-07ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಆಶಾದೇವಿ, ಗೋವಿಂದರಾಜು,ವೃಂದಮ್ಮ, ರಾಜಣ್ಣ, ಶ್ರೀಧರ್, ಶಿವಕುಮಾರ್, ಸಿದ್ದೇಶ್ವರಪ್ಪ, ಶಾಂತಯ್ಯ, ಕುಮರೇಶಿ, ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.