ಹುಬ್ಬಳ್ಳಿ:
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 80ನೇ ವಾರ್ಡ್‌ನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸಂಚರಿಸಿ ಸ್ವಚ್ಛತೆ ಪರಿಶೀಲಿಸಿದರು.ಇಲ್ಲಿನ ನೇಕಾರನಗರ, ಬಾಲಾಜಿ ಕಾಲನಿ, ಬಾನೂರ್ ಲೇಔಟ್, ಗಣೇಶ್ ಕಾಲನಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿಯ ಜನರ ಕುಂದು-ಕೊರತೆ ಆಲಿಸಿ ಯುಜಿಡಿ, ರಸ್ತೆ, ಗಟಾರ, ದಾರಿದೀಪ, ನೀರು ಹಾಗೂ ಸಣ್ಣಪುಟ್ಟ ಸಮಸ್ಯೆಗಳಿಗೆ ತುರ್ತು ಕ್ರಮಕೈಗೊಳ್ಳುವ ಕುರಿತು ಸ್ಥಳದಲ್ಲಿ ಸಾರ್ವಜನಿಕರ ಜತೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಯುಜಿಡಿ ಹಾಗೂ ರಸ್ತೆಯ ವ್ಯವಸ್ಥೆ ಸರಿಯಿಲ್ಲದ ಕಾರಣ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳದಲ್ಲಿ ಹಾಜರಿದ್ದ ಸಹಾಯಕ ಆಯುಕ್ತರಿಗೆ ಸಮಸ್ಯೆ ಪರಿಹರಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಆದೇಶಿಸಿದರು. ಈ ಪ್ರದೇಶದಿಂದ ಹಾಯ್ದು ರಾಜ ಕಾಲುವೆ ಸೇರುವ ನಾಲಾವನ್ನು ಜೆಸಿಬಿಯಿಂದ ಸ್ವಚ್ಛ ಮಾಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕಸದ ಗಾಡಿ ಹಾಗೂ ಸ್ವಚ್ಛತೆಯ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಕಾರ್ಯನಿರ್ವಾಹಕ ಅಭಿಯಂತರರು ಘನ ತ್ಯಾಜ್ಯ ವಸ್ತು ನಿರ್ವಹಣಾ ವಿಭಾಗದ ಮಲ್ಲಿಕಾರ್ಜುನ, ವಲಯ ಸಹಾಯಕ ಆಯುಕ್ತ ಹಾಗೂ ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿ ಸರಿಯಾದ ಸಮಯಕ್ಕೆ ಕಸದ ಗಾಡಿ ಕಳಿಸಿ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕಾರ್ಯನಿರ್ವಹಿಸಲು ಹೇಳಿದರು.ಕುಡಿಯುವ ನೀರಿನ ದೂರಿನ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಾಜರಿದ್ದ ಎಲ್ಎನ್‌ಟಿ ಅಧಿಕಾರಿಯನ್ನು ಸಂಪರ್ಕಿಸಿ ತಕ್ಷಣ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಸರಿ ಪಡಿಸುವಂತೆ ನಿರ್ದೇಶನ ನೀಡಿದರು.ಈ ವೇಳೆ ಪಾಲಿಕೆ ಸದಸ್ಯೆ ಶಾಂತಾ ಹಿರೇಮಠ, ಉಪ ಆಯುಕ್ತ ವಿಜಯಕುಮಾರ್, ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ್, ಮಲ್ಲಿಕಾರ್ಜುನ,
ಗಣಾಚಾರಿ, ವಲಯ ಸಹಾಯಕ ಆಯುಕ್ತ ಮನೋಜ್ ಕುಮಾರ್, ಪರಿಸರ ಅಭಿಯಂತರ ಯುವರಾಜ, ಸಹಾಯಕ ಅಭಿಯಂತರ ಶ್ರುತಿ, ಆರೋಗ್ಯ ನಿರೀಕ್ಷಕಿ ಜ್ಯೋತಿ ನರೇಂದ್ರ, ಶಿವರಾಜ್ ಸಲಗಾಂಕರ, ಶಿವಕುಮಾರ್, ಮಾರುತಿ, ಉಮೇಶ್ ಹಾಗೂ ಮಂಜುನಾಥ್ ದೈವಜ್ಞ ಸೇರಿದಂತೆ ಹಲವರಿದ್ದರು.