ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸಿ: ಡಿಸಿ ನಲಿನ್‌ ಅತುಲ್‌

KannadaprabhaNewsNetwork | Published : Aug 7, 2024 1:10 AM

ಸಾರಾಂಶ

ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವದರ ಮೂಲಕ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಜನಸ್ಪಂದನಾ ಕಾರ್ಯಕ್ರಮ

ಡಿಸಿ, ಜಿಪಂ ಸಿಇಒ, ಎಸ್ಪಿ ಸಮ್ಮುಖದಲ್ಲಿ ಅರ್ಜಿ ವಿಲೇವಾರಿ

ಕನ್ನಡಪ್ರಭ ವಾರ್ತೆ ಕಾರಟಗಿ

ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವದರ ಮೂಲಕ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಎಪಿಎಂಸಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ, ಅಹವಾಲು ಆಲಿಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದನ್ವಯ ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೆಲಸಗಳಿಗಾಗಿ ಕಚೇರಿಗಳಿಗೆ ಜನರ ಅಲೆದಾಟ ತಡೆಯುವುದು ಹಾಗೂ ಸಾರ್ವಜನಿಕರ ಹೊರೆ ತಡೆಯುವುದೇ ಈ ಕಾರ್ಯಕ್ರಮದ ಉದ್ದೇಶ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರದ ಜೊತೆಗೆ ಸಕಾಲದಲ್ಲಿ ಸೇವೆಗಳು ಸಿಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಅರ್ಜಿ, ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಈ ಹಿಂದೆ ಜಿಲ್ಲೆಯ ಕನಕಗಿರಿ ಮತ್ತು ಕುಕನೂರ ತಾಲೂಕುಗಳಲ್ಲಿ ನಡೆಸಿದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ಚೀಕೃತವಾದ ಅರ್ಜಿಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಿ ಜನತೆಗೆ ಸ್ಪಂದನೆ ನೀಡಲಾಗಿದೆ. ಈಗ ಸಿದ್ದಾಪುರದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಕಾರ್ಯಕ್ರಮದಲ್ಲಿ ಜನರು ಸಲ್ಲಿಸಿದ ಅರ್ಜಿಗಳಿಗೆ ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಎಲ್ಲ ಅರ್ಜಿಗಳ ಮಾಹಿತಿಯನ್ನು ಐ.ಪಿ.ಜಿ.ಆರ್.ಎಸ್.ನಲ್ಲಿ ಅಪ್ಲೋಡ್ ಮಾಡಲಾಗುವುದು. ಇದರಿಂದ ಸಾರ್ವಜನಿಕರು ತಮ್ಮ ಅರ್ಜಿಯ ಸ್ಥಿತಿಯ ಬಗ್ಗೆ ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ ಎಂದರು.

ವಿವಿಧ ಅರ್ಜಿ, ಮನವಿ ಸಲ್ಲಿಕೆ:ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ ಹುಳ್ಕಿಹಾಳ ಸರಕಾರಿ ಪ್ರೌಢ ಶಾಲೆಯ ಜಾಗವನ್ನು ಬೇಗನೆ ಹದ್ದುಬಸ್ತು ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ಸಿದ್ದಾಪುರದ ಪ್ರವೀಣ ಕುಮಾರ ಗ್ರಾಮಕ್ಕೆ ಒಂದು ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಮಂಜೂರು ಮಾಡುವಂತೆ ಮನವಿ ಮಾಡಿದರು.

ಸಂಧ್ಯಾ ಸುರಕ್ಷಾ ಮಾಸಾಶನ, ನಿರ್ಗತಿಕ ವಿಧವಾ ವೇತನಕ್ಕಾಗಿ, ಪೌತಿ ಖಾತೆ, ಪಹಣಿ ತಿದ್ದುಪಡಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.

ಬೆಳಗ್ಗೆಯಿಂದ ಒಟ್ಟು ೨೫೬ ಅರ್ಜಿಗಳು ಸಲ್ಲಿಕೆಯಾದವು. ಪಿಂಚಣಿ ಸೌಲಭ್ಯ ಸೇರಿದಂತೆ ಕೆಲವೊಂದನ್ನು ಅಹವಾಲುಗಳಿಗೆ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ಎಂ. ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ ಯಾದವ್, ಗ್ರಾಪಂ ಅಧ್ಯಕ್ಷ ಶಿವಗಂಗಮ್ಮ ಪಂಪಾಪತಿ ಭೋವಿ, ಉಪಾಧ್ಯಕ್ಷ ಗಂಗಪ್ಪ ಸುಂಕದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ವಿವಿಧ ಕಾಮಗಾರಿಗಳ ಪರಿಶೀಲನೆ:

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಪಂಗೆ ಭೇಟಿ ನೀಡಿ, ಅಧ್ಯಕ್ಷೆ, ಸದಸ್ಯರು ಹಾಗೂ ತಾಪಂ ಇಒ ಲಕ್ಷ್ಮೀದೇವಿ ಯಾದವ್ ಅವರೊಂದಿಗೆ ಮೂಲ ಸೌಕರ್ಯಗಳು ಇತರ ಗ್ರಾಮದ ಸಮಸ್ಯೆಗಳ ಕುರಿತು ಚರ್ಚಿಸಿದರು. ನಂತರ ಗ್ರಾಪಂ ಆವರಣದ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ, ಗ್ರಂಥಾಲಯಕ್ಕೆ ಬರುವ ಮಕ್ಕಳ ಹಾಗೂ ಸಾರ್ವಜನಿಕರ ಹಾಜರಾತಿಯನ್ನು ಪರಿಶೀಲನೆ ಮಾಡಿ, ಮೇಲ್ವಿಚಾರಕರೊಂದಿಗೆ ಸಮಾಲೋಚನೆ ಮಾಡಿದರು. ನಂತರ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ಗ್ರಾಮದಲ್ಲಿನ ಹಸಿ, ಒಣ ಕಸ ವಿಂಗಡಣೆಯನ್ನು ಘಟಕದಲ್ಲಿ ಪ್ರಾರಂಭಿಸುವಂತೆ ತಿಳಿಸಿದರು. ನಂತರ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯಕ್ಕೆ ಭೇಟಿ ನೀಡಿ, ಬಿಸಿಯೂಟದ ಅಡುಗೆ ಸಹಾಯಕರೊಂದಿಗೆ ಮಕ್ಕಳಿಗೆ ನೀಡುವ ಊಟದ ಮಾಹಿತಿ ಪಡೆದರು.

Share this article