ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಅಹವಾಲುಗಳಿಗೆ ಪರಿಹಾರ ದೊರೆತಾಗ ಮಾತ್ರ ಜನಸ್ಪಂದನ ಕಾರ್ಯಕ್ರಮ ಅರ್ಥ ಪೂರ್ಣವಾಗುತ್ತದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತ ಅಹವಾಲುಗಳ ಅರ್ಜಿಗಳನ್ನು ಆದಷ್ಟು ಬೇಗ ಬಗೆಹರಿಸುವ ಮೂಲಕ ವಿಲೇವಾರಿ ಮಾಡಬೇಕು. ಕಾನೂನು ತೊಡಕು ಇರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಬಾಕಿಯಿಟ್ಟುಕೊಳ್ಳಬಾರದು ಎಂದು ನಿರ್ದೇಶನ ನೀಡಿದರಲ್ಲದೆ ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಜನರು ಸಮಸ್ಯೆಗಳಿಂದ ದೂರವಿರಲು ಸಾಧ್ಯ. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿನ ವಿಷಯಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಜನಸ್ಪಂದನ ಆಯೋಜಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಂದಾಯ ಇಲಾಖೆ, ಜಿಪಂ ಕುಡಿವ ನೀರಿನ ಸಮಸ್ಯೆ, ಪಡಿತರ ಚೀಟಿ ಸಮಸ್ಯೆ, ಸಂಧ್ಯಾ ಸುರಕ್ಷಾ, ಇನ್ನಿತರ ವಿವಿಧ ಇಲಾಖೆ ಸಮಸ್ಯೆ ಬಗ್ಗೆ ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಹುಡಾ ಅಧ್ಯಕ್ಷ ಎಚ್‌ಎನ್ ಮಹಮ್ಮದ್ ಇಮಾಮ್ ನಿಯಾಜಿ, ಜಿಪಂ ಸಿಇಒ ಸದಾಶಿವ ಬಿ. ಪ್ರಭು, ಅರಣ್ಯ ಉಪ ಸಂರಕ್ಷಣಾಧಿಕಾರಿ ಅರ್ಸಲನ್, ಹೆಚ್ಚುವರಿ ಎಸ್.ಪಿ. ಸಲೀಂ ಪಾಷಾ, ಉಪ ವಿಭಾಗೀಯ ಅಧಿಕಾರಿ ಎನ್. ಮೊಹಮ್ಮದ್ ಅಲಿ ಅಕ್ರಂ ಷಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಡಿಎಚ್‌ಒ ಶಂಕರ್ ನಾಯ್ಕ, ಪಿ.ಡಿ. ಮನೋಹರ್, ತಹಸೀಲ್ದಾರ್ ವಿಶ್ವಜಿತ್ ಮಹೆತಾ, ತಾಪಂ ಇಒ ಹರೀಶ್ ಇತರರಿದ್ದರು. ಒಟ್ಟು 48 ಅರ್ಜಿಗಳು ಬಂದಿದ್ದು, ಈ ಪೈಕಿ ಕೆಲ ಅರ್ಜಿಗಳನ್ನು ಸ್ಥಳದಲ್ಲೇ ವಿಲೇ ಮಾಡಲಾಯಿತು.ನಿಯಮಾನುಸಾರ ಲೇಔಟ್ ಗಳಿಗೆ ಅನುಮತಿ ನೀಡಿ
ನಗರದ ಹೊರವಲಯದ ಹಂಪಿ ರಸ್ತೆಯಲ್ಲಿನ ಶಿವಜೋತಿನಗರ, ಎಂ,ಪಿ. ಪ್ರಕಾಶನಗರದ ಟೀಚರ್ಸ್ ಕಾಲೋನಿ ಸೇರಿದಂತೆ ಹಲವು ಲೇಔಟ್ ಗಳಲ್ಲಿ ಫಾರಂ ನಂಬರ್-3 ಕೊಡುತ್ತಿಲ್ಲ ಇದರಿಂದ ಹಲವು ಸಮಸ್ಯೆಗಳಾಗುತ್ತಿದ್ದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿದೆ. ದಯಮಾಡಿ ಇದನ್ನು ಪರಿಹರಿಸಿ ಎಂದು ಲೇಔಟ್ ಗಳ ನಿವಾಸಿಗಳಿಂದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಲೇಔಟ್‌ಗಳ ನಿರ್ಮಾಣ ನಿಯಮಾನುಸಾರ ಆಗಬೇಕು. ಇಲ್ಲದಿದ್ದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ಲೇಔಟ್ ಗಳಲ್ಲಿ ಜಮೀನು ಖರೀದಿ ಮುನ್ನ ಪರಿಶೀಲಿಸಿ. ಲೇಔಟ್‌ಗಳ ಸಮಸ್ಯೆ ಪರಿಶೀಲಿಸಿ ನಿಯಮನುಸಾರ ಕ್ರಮ ಕೈಗೊಳ್ಳುವಂತೆ ಪಿಡಿಒ ಮನೋಹರ್ ಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಂಗನವಾಡಿಗಳಿಗೆ ಜಾಗ ಕೊಡಿನಗರದ ಅಂಗನವಾಡಿಗಳಿಗೆ ಕೂಡಲೇ ಶಿಕ್ಷಣ ಇಲಾಖೆ ಪರಿಶೀಲಿಸಿ ಶಾಲಾ ಆವರಣಗಳಲ್ಲೇ ಜಾಗ ನೀಡಬೇಕು ಎಂದು ಬಿಇಒ ಶರಣಪ್ಪ ಮುದುಗಲ್ ಅವರಿಗೆ ಸೂಚಿಸಿದರು. ಈಗಾಗಲೇ ಎಂಟು ಅಂಗನವಾಡಿಗಳಿಗೆ ಜಾಗ ನೀಡಲು ಸೂಚಿಸಲಾಗಿದೆ. ಈ ಕಾರ್ಯ ತುರ್ತಾಗಿ ನಡೆಯಬೇಕು. ಜನಸ್ಪಂದನ ಸಭೆಗೆ ಅಂಗನವಾಡಿ ಸೂಪರ್ ವೈಸರ್‌ಗಳು ಕೂಡ ಆಗಮಿಸಬೇಕು ಎಂದು ಸಿಡಿಪಿಒ ಸಿಂಧೂ ಯಲಿಗಾರ್ ಅವರಿಗೆ ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಸುಖಾಸುಮ್ಮನೆ ಸರ್ಕಾರದ ವಿರುದ್ಧ ಹೇಳಿಕೆ ನೀಡಬಾರದು, ನೀವೂ ಸರ್ಕಾರದ ನೌಕರರ ಭಾಗ ಎಂಬುದನ್ನು ಅರಿಯಬೇಕು ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ. ನಾಗರತ್ನಮ್ಮ ಅವರಿಗೆ ಸೂಚ್ಯವಾಗಿ ಹೇಳಿದರು.ಜನಸ್ಪಂದನ ಸಭೆಯಿಂದ ಜನರು ದೂರ ದೂರ
ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಜನರೇ ಇರಲಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳೇ ಹೆಚ್ಚಿದ್ದರು. ಸ್ವತಃ ಜಿಲ್ಲಾಧಿಕಾರಿಯೇ ತಾಲೂಕುಮಟ್ಟದ ಜನಸ್ಪಂದನ ನಡೆಸಿದರೂ ಜನರು ದೂರ ಉಳಿದಿದ್ದರು. ಈ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೆ ಕೇಳಿದರೆ, ಜಿಲ್ಲಾ ಕೇಂದ್ರ ಇರುವುದರಿಂದ ದಿನವೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಹಾಗಾಗಿ, ಜನರು ಅಷ್ಟಾಗಿ ಬಂದಿಲ್ಲ ಎಂದು ಉತ್ತರಿಸಿದರು.