ದೂರು ಸ್ವೀಕೃತವಾದಾಗ ಕೂಡಲೇ ಸ್ಪಂದಿಸಿ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಸಹಾಯವಾಣಿ 1950ಸಂಖ್ಯೆಗೆ ಚುನಾವಣಾ ಮಾಹಿತಿ ಕೋರಿ ಯಾರೇ ಕರೆ ಮಾಡಿದರೂ ನಿಯೋಜಿತ ಅಧಿಕಾರಿ/ಸಿಬ್ಬಂದಿ ಅಗತ್ಯ ಮಾಹಿತಿ ನೀಡಬೇಕು. ದೂರು ಕರೆಗಳು ಸ್ವೀಕೃತವಾದಾಗ ಕೂಡಲೇ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಹಾಯವಾಣಿ 1950ಸಂಖ್ಯೆಗೆ ಚುನಾವಣಾ ಮಾಹಿತಿ ಕೋರಿ ಯಾರೇ ಕರೆ ಮಾಡಿದರೂ ನಿಯೋಜಿತ ಅಧಿಕಾರಿ/ಸಿಬ್ಬಂದಿ ಅಗತ್ಯ ಮಾಹಿತಿ ನೀಡಬೇಕು. ದೂರು ಕರೆಗಳು ಸ್ವೀಕೃತವಾದಾಗ ಕೂಡಲೇ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರು, ವಿಚಾರಣೆ, ಮತ್ತಿತರ ಮಾಹಿತಿಗಾಗಿ ಸಂಪರ್ಕಿಸಲು ಅನುವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ 0816-1950 ರ ಕಾರ್ಯಾವಧಿಯನ್ನು ವಿಸ್ತರಿಸಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆಯ ಕಾರ್ಯಾವಧಿಯನ್ನು ಗುರುವಾರದಿಂದ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ವಿಸ್ತರಿಸಬೇಕೆಂದು ಸೂಚನೆ ನೀಡಿದರು.

ಕಳೆದ 6 ತಿಂಗಳಲ್ಲಿ ಸಹಾಯವಾಣಿ ಸಂಖ್ಯೆಗೆ ಸ್ವೀಕೃತವಾದ ಕರೆ/ ದೂರುಗಳ ಬಗ್ಗೆ ಮಾಹಿತಿಯನ್ನು ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದಾಗ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಉತ್ತರಿಸುತ್ತಾ ಅ. 28 ರಿಂದ ಡಿ.19 ರವರೆಗೆ ವಿಚಾರಣೆ ಕೋರಿ 386 ಹಾಗೂ ದೂರಿಗೆ ಸಂಬಂಧಿಸಿದ 4 ಕರೆ ಸೇರಿದಂತೆ ಒಟ್ಟು 390 ಕರೆಗಳು ಸ್ವೀಕೃತವಾಗಿವೆ. ದೂರಿಗೆ ಸಂಬಂಧಿಸಿದ 4 ಕರೆಗಳಿಗೂ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ವೀಕ್ಷಕರ ಗಮನಕ್ಕೆ ತಂದರು.

ವಿದೇಶದಲ್ಲಿ ವಾಸವಿರುವ ಜಿಲ್ಲೆಯ ಮತದಾರರ ಬಗ್ಗೆ ಸಭೆಯಲ್ಲಿ ಚಿರ್ಚಿಸಿದಾಗ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ವಿದೇಶದಲ್ಲಿ ವಾಸವಿರುವ ಮತದಾರರ ಪೈಕಿ ಈವರೆಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ೨ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ಮಣಿವಣ್ಣನ್ ಅವರು ವಿದೇಶದಲ್ಲಿ ವಾಸವಿರುವವರು ಮತದಾನ ಮಾಡಲು ನಮೂನೆ-6ಎ ಮೂಲಕ ಅರ್ಜಿ ಸಲ್ಲಿಸಬೇಕು. ಈ ಕುರಿತು ಜಿಲ್ಲಾಡಳಿತದಿಂದ ಸೂಕ್ತ ಪ್ರಚಾರ ನೀಡಬೇಕು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅನುವಾಗುವಂತೆ ನಗರ ಪ್ರದೇಶ ವ್ಯಾಪ್ತಿಯ ಎಲ್ಲಾ ಮನೆಗಳ ಮೇಲೆ ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‌ಓ)ಗಳ ಮೊಬೈಲ್ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಅಂಟಿಸಬೇಕೆಂದು ಸೂಚನೆ ನೀಡಿದರು.

ನಿಷ್ಪಕ್ಷಪಾತ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕಣಾ ಕಾರ್ಯವನ್ನು ಪಾರದರ್ಶಕವಾಗಿ ನಡೆಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯು ಚುನಾವಣೆಯ ಪ್ರಮುಖ ಘಟ್ಟ. ಈ ಕಾರ್ಯದಲ್ಲಿ ಲೋಪ ಎಸಗುವ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮತದಾನ ದಿನವನ್ನು ಮಾತ್ರ ಚುನಾವಣಾ ಕರ್ತವ್ಯವೆಂದು ಭಾವಿಸದೆ ಚುನಾವಣಾ ಕರ್ತವ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಭಾವಿಸಿ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗಧಿತ ಅವಧಿಯೊಳಗೆ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಇಂದಿನಿಂದಲೇ ಸಹಾಯವಾಣಿಯನ್ನು ಸ್ಥಾಪಿಸಬೇಕು. ದೂರು/ವಿಚಾರಣೆಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಕರೆಗಳ ವಿವರವನ್ನು ದಾಖಲಿಸಲು ಪ್ರತ್ಯೇಕ ವಹಿಯನ್ನು ನಿರ್ವಹಣೆ ಮಾಡಿ, ಪ್ರತಿ ದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕೆಂದು ನಿರ್ದೇಶಿಸಿದರು.

ನಿಗದಿತ ಅವಧಿಯೊಳಗೆ ನಿಗದಿತ ನಮೂನೆಯಲ್ಲಿ ಸಲ್ಲಿಕೆಯಾದ ೩೫೭೫೧ ಅರ್ಹ ಮತದಾರರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಜಿಲ್ಲೆಯಲ್ಲಿ ಶೇ.೧೦೦ರಷ್ಟು ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಮತದಾರರ ಅನುಕೂಲಕ್ಕಾಗಿ ಪಾಲಿಕೆ ಹಾಗೂ ಜಿಲ್ಲಾಡಳಿತದ ಜಾಲತಾಣದಲ್ಲಿಯೂ ಬಿಎಲ್‌ಓಗಳ ಮೊಬೈಲ್ ಸಂಖ್ಯೆ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಅಪ್‌ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ, ಎಲ್ಲಾ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮುನ್ನ ತುಮಕೂರು ಗ್ರಾಮಾಂತರ ಪ್ರದೇಶದ ಹಿರೇಹಳ್ಳಿ, ಚಿಕ್ಕಹಳ್ಳಿ; ನಗರ ಪ್ರದೇಶದ ಮತಗಟ್ಟೆ ಸಂಖ್ಯೆ 180, 151, 84, 100, ಹಾಗೂ 57ರಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪರಿಶೀಲಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಪಾಲಿಕೆ ಉಪ ಆಯುಕ್ತೆ ಸುಮತಿ ಅವರಿಂದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ವಿವರಣೆ ಪಡೆದರು.

Share this article