ಹಾವೇರಿ: ಬರಗಾಲದಿಂದ ಬೆಳೆಗಳು ಒಣಗಿ, ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಧಾವಿಸಬೇಕು. ಬರ ಪರಿಹಾರ ನೀಡುವುದರ ಜತೆಗೆ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ. ಇಂತಹ ಸಂದರ್ಭದಲ್ಲಿ ರೈತರ ಖಾತೆಗೆ ಕೇವಲ ೨,೫೦೦ ಇನ್‌ಪುಟ್ ಸಬ್ಸಿಡಿ ನೀಡುವುದು ಸಮರ್ಪಕ ಪರಿಹಾರವಲ್ಲ. ಹಾನಿಗೀಡಾದ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ ೨೫ ಸಾವಿರ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಹಕಾರಿ ಸಂಘಗಳಲ್ಲಿನ ಕೃಷಿ ಸಾಲವನ್ನೂ ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಕೆ.ಎಸ್.ಸುಧೀರಕುಮಾರ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ನಿಗದಿಪಡಿಸುವ ನ್ಯಾಯಯುತ ಮತ್ತು ಲಾಭದಾಯಕ ಎಫ್‌ಆರ್‌ಪಿ ದರವನ್ನು ಹೆಚ್ಚಿಸಬೇಕು. ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ತೂಕದ ಯಂತ್ರಗಳನ್ನು ಸ್ಥಾಪಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಹಿಂದಿನಂತೆ ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದು, ಸುಟ್ಟ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ತ್ವರಿತವಾಗಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.೨೦೨೪-೨೫ನೇ ಸಾಲಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಹಾನಿಗೀಡಾಗಿದ್ದು, ಬೆಳೆವಿಮೆ ಕಂತು ಪಾವತಿಸಿದ ರೈತರಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಅರ್ಹ ರೈತರಿಗೆ ಕೂಡಲೇ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಬಸವರಾಜ ದೇವಗಿರಿ, ಚನ್ನವೀರಯ್ಯ ಹೊಸಮಠ, ತಿಮ್ಮಣ್ಣ ಸವಣೂರ, ಮಂಜುನಾಥ ಹುಲಗೂರ, ದುರ್ಗಪ್ಪ ಅಲ್ಲಿಪೂರ, ಮಲ್ಲಿಕಾರ್ಜುನ ಹುಂಬಿ ಸೇರಿದಂತೆ ಇತರರು ಇದ್ದರು.