ಕಿಗ್ಗಾದಲ್ಲಿ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಅಧಿಕಾರಿಗಳಿಗೆ ಸೂಚನೆ.
ಅಗತ್ಯ ಕೆಲಸ ಕಾರ್ಯಗಳಿಗೆ ತಮ್ಮಸಮಸ್ಯೆಗಳನ್ನು ಹೊತ್ತು ಜನರು ಕಚೇರಿಗಳಿಗೆ ಬರುತ್ತಾರೆ. ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮರ್ಕಲ್ ಪಂಚಾಯಿತಿ ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಜಾ ಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿ ಜನರ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತದೆ. ಜನರು ಕೆಲಸ ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಸಾಕಷ್ಟು ತಪ್ಪಿಸಬೇಕು. ವಿವಿಧ ಇಲಾಖೆ ಅಧಿಕಾರಿಗಳು ಒಂದೇ ಕಡೆ ಸಿಗುವಂತಾಗಬೇಕು.ಸ್ಥ ಳದಲ್ಲೇ ಅರ್ಜಿ ಸ್ವೀಕರಿಸಿ ಆಯಾ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುವುದು ಕಾರ್ಯಕ್ರಮದ ಉದ್ದೇಶ.ಶೃಂಗೇರಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕಂದಾಯ ಅರಣ್ಯ ಇಲಾಖೆ ಸಮಸ್ಯೆಸೇರಿದಂತೆ ಪ್ರಮುಖ ಸಮಸ್ಯೆಗಳಿದ್ದು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದಿನ ಸಭೆಯಲ್ಲಿ ಇಲಾಖಾವಾರು ಸುಮಾರು 69 ಅರ್ಜಿ ಗಳು ಬಂದಿದ್ದು ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಂಟಿ ಸರ್ವೆ ಮುಗಿದಿದೆ.ಅರಣ್ಯ ಕಂದಾಯ ಭೂಮಿ, ಗೋಮಾಳ ಕಂದಾಯ ಭೂಮಿ,ಸೊಪ್ಪಿನ ಬೆಟ್ಟ ಭೂಮಿ ಗಂಭೀರ ಸಮಸ್ಯೆಯಾಗಿದೆ. ಅರಣ್ಯ ಕಾಯ್ದೆಗಳಿಂದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುತ್ತಿದೆ. ಅರಣ್ಯ ಇಲಾಖೆ ಅವೈಜ್ಞಾನಿಕ ಸರ್ವೆಯಿಂದ 4(1) ನೋಟಿಫಿ ಕೇಷನ್ ಆಗಿ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ ಎಂದರು.
ಸಭೆಯಲ್ಲಿ ಗ್ರಾಮಸ್ಥರು ಕಂದಾಯ ,ವಿದ್ಯುತ್,ಗೃಹಲಕ್ಷ್ಮಿ,ಕುಡಿಯುವ ನೀರು ಸೇರಿ ಹಲವು ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿ ಅಹವಾಲು ಮಂಡಿಸಿದರು. ಗ್ರಾಮಸ್ಥೆ ಸವಿತಾ ಅಹವಾಲು ಸಲ್ಲಿಸಿ ಗೃಹಲಕ್ಷ್ಮಿ ಹಣ ಕಡು ಬಡವರಿಗೆ ಬರುತ್ತಿಲ್ಲ. ನಾವು ಕೇಳಿ ದರೆ ದಾಖಲೆ ಸರಿಯಿಲ್ಲ ಎನ್ನುತ್ತಾರೆ ಎಂದಾಗ ಇದಕ್ಕೆ ಕೆಲವರು ಧ್ವನಿಗೂಡಿಸಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದವರಿಗೆ, ಬಡ ವರಿಗೆ ಆದಾಯ ಇಲಾಖೆಯಿಂದ ನೋಟಿಸ್ ಬರುತ್ತಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆ ನಿಜವಾದ ಫಲಾನುಭವಿಗಳು ಯಾರು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಅನೂಪ್ ಸಂಜೋಗ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸುದೀಪ್, ಎಸಿಎಫ್ ಮೋಹನ್,ಕೆಡಿಪಿ ಸದಸ್ಯ ನೆಮ್ಮಾರ್ ಪುಟ್ಟಪ್ಪ ಹೆಗ್ಡೆ,ಅಗಸೊಳ್ಳಿ ನಾರಾಯಣ ಮತ್ತಿತರರು ಇದ್ದರು.