ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ-ಸಿಎಂ ಡಿಕೆಶಿ

KannadaprabhaNewsNetwork |  
Published : Aug 12, 2026, 02:30 AM IST
ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಜಿಲ್ಲೆಯ ಮಾಹಿತಿ ಒದಗಿಸಿದರು. | Kannada Prabha

ಸಾರಾಂಶ

ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು, ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಹಾವೇರಿ: ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು, ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಡಿಯೋ ಸಂವಾದದ ಹಿನ್ನೆಲೆಯಲ್ಲಿ ಇಲ್ಲಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮನ್ನು ಸೇರಿದಂತೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ಎಲ್ಲ ಸಿಎಂಗಳು ತಮ್ಮದೇ ರೀತಿಯಲ್ಲಿ, ತಮ್ಮದೇ ಅನುಭವ ಸಿದ್ಧಾಂತದ ಮೇಲೆ ಆಡಳಿತ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಜೈಲಿನ ಕೈದಿಗಳಿಂದ ವಿಧಾನಸೌಧ ಕಟ್ಟಿಸಿದರು. ಆಗ ಕೆಲವು ಕೈದಿಗಳು ಹನುಮಂತಯ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದರು. ವಿಶ್ವೇಶ್ವರಯ್ಯ ಅವರು 1 ರು. ಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸ ಇದೆ. ನಾನು ಈ ಹಿಂದಿನವರ ಕೆಲಸಗಳನ್ನು ಟೀಕೆ ಮಾಡುವುದಿಲ್ಲ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು.

ನಮ್ಮ-ನಿಮ್ಮ ಮೇಲೆ ಜನರ ಬದುಕಿನಲ್ಲಿ ಬದಲಾವಣೆ ತರುವ ಜವಾಬ್ದಾರಿ ಇದೆ. ನಾನು ಇತಿಹಾಸ ಓದಲು ಬರೆಯಲು ಇಚ್ಛಿಸುವುದಿಲ್ಲ. ಇತಿಹಾಸ ಸೃಷ್ಟಿಸಲು ಬಯಸುತ್ತೇನೆ. ಸರ್ಕಾರಿ ನೌಕರರ ಸೇವೆಯಿಂದಲೇ ನಮ್ಮ ರಾಜ್ಯ ಈ ಹಂತಕ್ಕೆ ಬೆಳೆದಿದೆ ಎಂದರು.

ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ: ನಮ್ಮಲ್ಲಿರುವ ಶಿಕ್ಷಣ, ಆರೋಗ್ಯ ಸೌಲಭ್ಯ ಬೇರೆ ಎಲ್ಲೂ ಇಲ್ಲ. ನಾನು ನನ್ನ ಮೇಲೆ ಕಣ್ಣು ಇಟ್ಟುಕೊಂಡಿದ್ದೇನೆ. ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತೇವೆ. ನಾವು ಕೆಲಸ ಮಾಡುವುದೇ ಜನರಿಗಾಗಿ. ಬೇರೆಯವರಿಗೆ ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ ಎಂದರು.

ಅಧಿಕಾರ ಜವಾಬ್ದಾರಿ ಸಂಕೇತ. ಇದು ಸಿಂಹಾಸನ ಅಲ್ಲ, ಅವಕಾಶ. ಮೂರ್ತಿಗೆ ಬೆಲೆ ಕಟ್ಟಿದರೂ ಭಗವಂತನಿಗೆ ಬೆಲೆ ಕಟ್ಟಲು ಆಗಲ್ಲ. ಜನರಲ್ಲೇ ದೇವರನ್ನು ಕಾಣಬಹುದು. ಗ್ಯಾರಂಟಿ ಬಗ್ಗೆ ಶಾಸಕರು, ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಟೀಕಿಸಿದರೂ ನಂತರ ಅವರೇ ಪಾಲಿಸುವಂತಾಗಿದೆ. ನಮ್ಮ ಮಾದರಿ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ..

ಪ್ರತಿ ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಅಲ್ಲೇ ವಾಸ ಇರಬೇಕು. ಇಂದು 750 ಕಡೆ ಸಭೆ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಪ್ರಮುಖ ನೌಕರನಾಗಿ ಸರ್ಕಾರದ ಚಿಂತನೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಾರಿ ಬಗ್ಗೆ ಮಾರ್ಗದರ್ಶನ ನೀಡಲು ಬಂದಿರುವೆ. ಮನಸ್ಸು ಶುದ್ಧವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ನೀಡಬಹುದು ಎಂದರು.

ಈ ತಿಂಗಳ ಒಳಗೆ ಭಾರತ ಜೋಡೋ ಸಂಘಗಳ ನೋಂದಣಿ ಸದಸ್ಯತ್ವ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ನಾಯಕತ್ವ ಆಯ್ಕೆ ಬಗ್ಗೆ ನಂತರ ತೀರ್ಮಾನ ಮಾಡಲಾಗುವುದು. ಎಲ್ಲಾ ಯುವಕರು, ಎಲ್ಲಾ ಸಮಾಜದವರಿಗೂ ಸಂಘದಲ್ಲಿ ಸದಸ್ಯತ್ವ ಸಿಗಬೇಕು. ಮಾನವೀಯತೆ, ಸೌಹಾರ್ದತೆ ಇರಬೇಕು " ಎಂದು ನಿರ್ದೇಶನ ನೀಡಿದರು.

ಹಾವೇರಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಜಿಲ್ಲೆಯ ಮಾಹಿತಿ ಒದಗಿಸಿದರು. ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ದಲ್ಜಿತ್‌ಕುಮಾರ, ಎಸ್ಪಿ ಯಶೋದಾ ವಂಟಗೋಡಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲುವೆಗಳಿಗೆ 90 ದಿನಗಳ ಕಾಲ ನೀರು: ತಂಗಡಗಿ
ನಾಗೇಂದ್ರ ಯಾಕೆ ರಾಜೀನಾಮೆ ಕೊಡಬೇಕು: ತಂಗಡಗಿ