ಸಬೂಬು ಹೇಳದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ: ಶಾಸಕ ಟಿ.ಡಿ.ರಾಜೇಗೌಡ ಸೂಚನೆ

KannadaprabhaNewsNetwork | Published : Jan 26, 2024 1:45 AM

ಸಾರಾಂಶ

ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಸಂವಿಧಾನ ಜಾಥಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ ಯಾವುದೇ ತುರ್ತು ಸಂದರ್ಭ ಬಂದಾಗ ಅನುಮತಿ ಪಡೆಯಬೇಕು. ಅನುದಾನ ಬಂದಿಲ್ಲ, ಪರಿಶೀಲಿಸಲಾಗುವುದು ಎಂಬ ಸಬೂಬುಗಳನ್ನು ಹೇಳದೆ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.

ಬರ ಪರಿಸ್ಥಿತಿ ನಿರ್ವಹಣೆ ಪೂರ್ವ ಭಾವಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಯಾವುದೇ ತುರ್ತು ಸಂದರ್ಭ ಬಂದಾಗ ಅನುಮತಿ ಪಡೆಯಬೇಕು. ಅನುದಾನ ಬಂದಿಲ್ಲ, ಪರಿಶೀಲಿಸಲಾಗುವುದು ಎಂಬ ಸಬೂಬುಗಳನ್ನು ಹೇಳದೆ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಸಂವಿಧಾನ ಜಾಥಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನಿನ ಚೌಕಟ್ಟಿನಡಿ ಸಮಸ್ಯೆ ಬಗೆಹರಿಸಿದ ನಂತರ ಇಲಾಖೆಯಿಂದ ಅನುಮೋದನೆ ಪಡೆಯಿರಿ. ಜನರ ಸಮಸ್ಯೆಗೆ ತುರ್ತು ಪರಿಹಾರ ದೊರಕಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇವೆಯೋ ಅಲ್ಲಿ ಹತ್ತಿರ ಇರುವ ಖಾಸಗಿ ಬೋರ್‌ ವೆಲ್‌ಗಳ ಮಾಲೀಕರ ವಿವರ ಪಡೆಯಿರಿ. ಟ್ಯಾಂಕರ್ ನೀರು ಪೂರೈಸುವ ಸಂದರ್ಭ ಎದುರಾಗಬಾರದು. ಜೆಜೆಎಂ ಯೋಜನೆಯಡಿ ಮೊದಲು ನೀರಿನ ಮೂಲ ಗುರ್ತಿಸಿ ನಂತರ ಪೈಪ್‌ಲೈನ್, ಟ್ಯಾಂಕ್ ಕಾಮಗಾರಿ ಮಾಡಬೇಕು ಎಂದರು.

ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ಕಾಡಿನಲ್ಲಿ ಇರುವ ಕೆರೆಗಳು, ಕೃಷಿ ಹೊಂಡ, ಕಲ್ಯಾಣಗಳನ್ನು ಅಭಿವೃದ್ಧಿ ಪಡಿಸಿ ಎಂದು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ದಲಿತ ಮುಖಂಡ ಚಿತ್ರಪ್ಪಯರಬಾಳ್ ಮಾತನಾಡಿ, ತಾಲೂಕಿನ ಆಲ್ದಾರ ಗ್ರಾಮದಲ್ಲಿ ಬೋರ್ ಕೊರೆದು ನಾಲ್ಕು ವರ್ಷ ವಾಗಿದೆ. ಟ್ಯಾಂಕ್ ನಿರ್ಮಿಸಿ 2 ವರ್ಷ ಆಗಿದೆ. ಪೈಪ್‌ಲೈನ್ ಕಾಮಗಾರಿ ಮುಗಿದು ವರ್ಷಗಳೇ ಕಳೆದಿದೆ. ಆದರೂ ಇನ್ನೂ ಸಂಪರ್ಕ ಕಲ್ಪಿಸಿಲ್ಲ ಎಂದರು. ಶೆಟ್ಟಿಕೊಪ್ಪ ಎಂ.ಮಹೇಶ್ ಮಾತನಾಡಿ, ಕಡಹಿನಬೈಲು ಗ್ರಾಪಂ ನಲ್ಲಿ ಕಳೆದ 3 ವರ್ಷ ದಿಂದ ಖಾಸಗಿ ಬೋರ್‌ವೆಲ್‌ನಿಂದ ನೀರನ್ನು ಪೂರೈಸಲಾಗುತ್ತಿದೆ. ಹೊಸ ಬೋರ್‌ವೆಲ್ ಕೊರೆಸಲು ಕ್ರಮವಾಗಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಬೇಕು ಎಂದು ಎಇಇ ವೀರಭ್ರದಪ್ಪ ಅವರಿಗೆ ಸೂಚಿಸಿದರು.

ಸಂವಿಧಾನ ಜಾಥಾ ಯಶಸ್ವಿಗೊಳಿಸಿ: ತಾಲೂಕಿಗೆ ಫೆ.8 ಹಾಗೂ ಫೆ.9 ರಂದು ಎರಡು ದಿನಗಳ ಕಾಲ ಸಂವಿಧಾನ ಜಾಥಾ ಆಗಮಿಸಲಿದೆ. ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ತುಂಬಿದ ಸವಿನೆನಪಿಗಾಗಿ ಈ ಜಾಥಾ ಆಗಮಿಸಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಿದೆ. ಇದರಲ್ಲಿ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿ ಜಾಥಾ ಯಶಸ್ವಿ ಗೊಳಿಸಬೇಕು. ಜಾಥಾ ಬಂದ ಸಂದರ್ಭದಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಉಪಸ್ಥಿತರಿರಬೇಕು. ಪೊಲೀಸರು ಜಾಥಾ ನರಸಿಂಹರಾಜಪುರ ತಾಲೂಕಿಗೆ ಬಂದು ಹೋಗುವುವರೆಗೂ ಸೂಕ್ತ ಭದ್ರತೆ ನೀಡಬೇಕು ಎಂದು ಸೂಚಿಸಿದರು.

ವೇದಿಕೆಯಲ್ಲಿ ತಹಸೀಲ್ದಾರ್ ತನುಜಾ.ಟಿ.ಸವದತ್ತಿ, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್‌ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share this article