ಕನ್ನಡಪ್ರಭ ವಾರ್ತೆ ದಾವಣಗೆರೆ
ಚಿಕ್ಕ ವಯಸ್ಸಿಗೆ ನನಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನರು ವಹಿಸಿರುವ ಜವಾಬ್ಧಾರಿ ನಿರೀಕ್ಷೆಯನ್ನೂ ಮೀರಿ, ಅತ್ಯುತ್ತಮವಾಗಿ ನಿರ್ವಹಿಸುವೆ ಎಂದು ಚಿಕ್ಕೋಡಿ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದರು.ನಗರದ ಪಿಜೆ ಬಡಾವಣೆ ಮಹರ್ಷಿ ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಸಮಾಜ ಬಾಂಧವರಿಂದ ಸನ್ಮಾನಿತರಾಗಿ ಮಾತನಾಡಿ, ಚಿಕ್ಕೋಡಿ ಜನತೆ ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ಧಾರಿ ನೀಡಿದ್ದಾರೆ. ನಿರೀಕ್ಷೆ ಮೀರಿ ಉತ್ತಮವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ನನಗೆ ನೀಡುವ ಬಗ್ಗೆ ಯಾರಿಂದಲೂ ವಿರೋಧ ಇರಲಿಲ್ಲ. ಯಾವುದೇ ವಿರೋಧವೂ ಇರಲಿಲ್ಲ. ಎಲ್ಲರೂ ಸಭೆ ನಡೆಸಿದ ನಂತರ ತೀರ್ಮಾನ ಕೈಗೊಂಡ ನಂತರವೇ ನನಗೆ ಟಿಕೆಟ್ ನೀಡಿದ್ದಾರೆ. ಅದರಂತೆ ಪಕ್ಷ ಟಿಕೆಟ್ ನೀಡಿದರೆ, ಚಿಕ್ಕೋಡಿ ಕ್ಷೇತ್ರದ ಮತದಾರರು ಆಶೀರ್ವದಿಸಿದ್ದಾರೆ ಎಂದು ಹೇಳಿದರು.ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಕಡಿಮೆ ಮುನ್ನಡೆ ಬಂದಿರುವುದಕ್ಕೆ ಲಕ್ಷ್ಮಣ ಸವದಿಯವರು ಕೆಲಸ ಮಾಡಿಲ್ಲವೆಂದು ನಮ್ಮ ತಂದೆ ಹೇಳಿದ್ದಾರೆ. ಹಾಗಾಗಿ ಇದು ಲಕ್ಷ್ಮಣ ಸವದಿಯವರು ಹಾಗೂ ತಮ್ಮ ತಂದೆಗೆ ಬಿಟ್ಟ ವಿಚಾರ. ಇದರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ, ಜನರ ಆಶೋತ್ತರಕ್ಕೆ ಸ್ಪಂದಿಸಿ, ಮಾದರಿ ಕ್ಷೇತ್ರ ಮಾಡುವುದಕ್ಕೆ ಶ್ರಮಿಸುವುದಷ್ಟೇ ತಮ್ಮ ಗುರಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೈಗಾರಿಕೆ ಸೇರಿ ಸಾಕಷ್ಟು ಸಮಸ್ಯೆಗಳು ಉತ್ತರ ಕರ್ನಾಟಕದಲ್ಲಿವೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತದೆ. ಅಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯನವರು ಅವುಗಳ ಬಗ್ಗೆ ಗಮನ ಹರಿಸುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತಾಗಿ ಲೋಕಸಭೆಯಲ್ಲೂ ಪ್ರಸ್ತಾಪ ಮಾಡುತ್ತೇನೆ. ಸಮಸ್ಯೆ ಅಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಅಲ್ಲ ಎಂದು ಹೇಳಿದರು.ಚಿಕ್ಕೋಡಿ ಕ್ಷೇತ್ರದ ಸಂಸದಳಾಗಿ ಆಯ್ಕೆಯಾದ ತಮಗೆ ದಾವಣಗೆರೆಯಲ್ಲಿ ನಾಯಕ ಸಮಾಜ ಬಾಂಧವರು ಸನ್ಮಾನಿಸಿರುವುದು ತುಂಬಾ ಸಂತೋಷ ತಂದಿದೆ. ತಮ್ಮ ತಂದೆ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ತೆರಳಿ, ಸಮಾಜ ಬಾಂಧವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಸಂಸದೆ ತಿಳಿಸಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಯುವ ಮುಖಂಡ ರಾಹುಲ್ ಜಾರಕಿಹೊಳಿ, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯೆ ಸವಿತಾ ಗಣೇಶ ಹುಲ್ಮನಿ, ಸಮಾಜದ ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಎಂ.ಬಿ.ಹಾಲಪ್ಪ, ಶ್ರೀನಿವಾಸ ಟಿ.ದಾಸಕರಿಯಪ್ಪ, ಹೊದಿಗೆರೆ ರಮೇಶ ಇತರರು ಇದ್ದರು.