ನಾಗರೀಕರ ಸಮಸ್ಯೆಗಳಿಗೆ ಸ್ಪಂದನೆ ಅಧಿಕಾರಿ-ಸಿಬ್ಬಂದಿ ಕರ್ತವ್ಯ

KannadaprabhaNewsNetwork |  
Published : May 28, 2026, 01:45 AM IST
ಕ್ಯಾಪ್ಷನ27ಕೆಡಿವಿಜಿ33 ದಾವಣಗೆರೆಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ  ಸ್ವಯಂ ಘೋಷಿತ ಆಸ್ಥಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ ಮತು ಪ್ರಗತಿ ಸಾಧಿಸಿರುವ ಅಧಿಕಾರಿ/ನೌಕರರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಪಾಟಿಸಿದರು. | Kannada Prabha

ಸಾರಾಂಶ

ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಕೇವಲ ಅರ್ಜಿದಾರರನ್ನಾಗಿ ನೋಡದೇ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸೂಕ್ತ ಪರಿಹಾರ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

- ಸಂಸದೆ ಡಾ.ಪ್ರಭಾ ಸಲಹೆ । ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ, ಪ್ರಗತಿ ಸಾಧಿಸಿರುವ ಅಧಿಕಾರಿ-ನೌಕರರಿಗೆ ಪ್ರಶಂಸನಾ ಪತ್ರ ವಿತರಣೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಕೇವಲ ಅರ್ಜಿದಾರರನ್ನಾಗಿ ನೋಡದೇ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಸೂಕ್ತ ಪರಿಹಾರ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಏಪ್ರಿಲ್ ಮಾಹೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ ಮತು ಪ್ರಗತಿ ಸಾಧಿಸಿರುವ ಅಧಿಕಾರಿಗಳು, ನೌಕರರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮ ಉದ್ಪಾಟಿಸಿ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಶೇಕಡ 50ಕ್ಕೂ ಹೆಚ್ಚು ತೆರಿಗೆ ವಸೂಲಾತಿಯಾಗಿ ಗಣನೀಯ ಸಾಧನೆಯಾಗಿದೆ. ನಗರದ ಅಭಿವೃದ್ಧಿಗೆ ಮೂಲಸೌಕರ್ಯ, ಹಸಿರೀಕರಣ ಹಾಗೂ ಸ್ವಚ್ಛತೆಯೇ ಮುಖ್ಯವಾಗಿದ್ದು, ಇದಕ್ಕೆ ತೆರಿಗೆ ವಸೂಲಾತಿ ಅತ್ಯಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ನೌಕರರಲ್ಲಿ ಉತ್ಸಾಹ ತುಂಬುತ್ತದೆ. ಯಾವುದೇ ಕೆಲಸ ಮಾಡುವಾಗ ಬೆನ್ನುತಟ್ಟಿ ಪ್ರೋತ್ಸಾಹಿಸಿದರೆ, ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ. ನಮ್ಮ ಅಧಿಕಾರಿಗಳು ನಮ್ಮ ಕೆಲಸವನ್ನು ಗುರುತಿಸುತ್ತಿದ್ದಾರೆ ಎಂಬ ಭಾವನೆ ನೌಕರರಲ್ಲಿ ಮೂಡುತ್ತದೆ. ಶಾಲಾ-ಕಾಲೇಜುಗಳಲ್ಲಿ ಪ್ರಾವೀಣ್ಯತೆ ಪ್ರಮಾಣಪತ್ರ ನೀಡುವ ಮಾದರಿಯಲ್ಲಿಯೇ ಇಲ್ಲೂ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಅಧಿಕಾರಿಗಳು ಕೇವಲ ನಿಯಮಗಳಿಗೆ ಕಟ್ಟುಬೀಳದೆ, ಕಷ್ಟದ ಪರಿಹಾರಕ್ಕೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು, ಕಚೇರಿಗೆ ಬರುವ ಜನರೊಂದಿಗೆ ಉತ್ತಮ ಸಂವಹನ ನಡೆಸಿ ಗೌರವಿಸಬೇಕು. ಗೌರವಾನ್ವಿತವಾಗಿರಬೇಕು ಎಂದರು.

ಸಾರ್ವಜನಿಕರು ತಂದ ಸಮಸ್ಯೆಗಳು ತಮ್ಮ ಇಲಾಖೆಗೆ ಸಂಬಂಧಿಸಿಲ್ಲದಿದ್ದರೂ, ಅದು ಯಾವ ಇಲಾಖೆಗೆ ಸಂಬಂಧಿಸಿದೆ ಮತ್ತು ಆ ಕಚೇರಿ ಎಲ್ಲಿದೆ ಎಂಬ ಸಂಪೂರ್ಣ ಮಾಹಿತಿ ನೀಡಿ ಮಾರ್ಗದರ್ಶನ ಮಾಡಬೇಕು. ಇದು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಅಥವಾ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದೇ ಎಂಬುದನ್ನು ಸಿಬ್ಬಂದಿ ಮೊದಲು ತಿಳಿದುಕೊಂಡಿರಬೇಕು ಎಂದು ತಿಳಿಸಿದರು.

ಪ್ರತಿ ಇಲಾಖೆಯಲ್ಲೂ ಪ್ರತಿ ತಿಂಗಳು ದಿಶಾ ಸಮಿತಿ ಹಾಗೂ ಕೆಡಿಪಿ ಮಾದರಿಯಲ್ಲಿ ಆಂತರಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಬೇಕು. ಒಂದು ವೇಳೆ ಅರ್ಜಿದಾರರು ಯೋಜನೆಗಳಿಗೆ ಅರ್ಹರಿಲ್ಲದಿದ್ದರೆ ಅಥವಾ ದಾಖಲೆಗಳ ಕೊರತೆಯಿದ್ದರೆ, ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಮತ್ತು ಅರ್ಹರಾಗಲು ಇನ್ನು ಏನೇನು ದಾಖಲೆಗಳು ಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನಕಲ್ಯಾಣ ಯೋಜನೆಗಳು, ಸಹಾಯವಾಣಿ ಸಂಖ್ಯೆಗಳು ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರತಿಯೊಂದು ಕಚೇರಿಯಲ್ಲೂ ಪ್ರದರ್ಶಿಸಬೇಕು ಎಂದು ತಿಳಿಸಿದರು.

ತೆರಿಗೆ ಸಂಗ್ರಹದಲ್ಲಿ ತಾಲೂಕುವಾರು ಪ್ರಗತಿಯಲ್ಲಿ ಹರಿಹರ ಶೇ.46ರಷ್ಟು ಹಾಗೂ ಚನ್ನಗಿರಿ ಶೇ.56ರಷ್ಟು ಪ್ರಗತಿ ಸಾಧಿಸಿದ್ದು, ಜಗಳೂರು ಮತ್ತು ಮಲೇಬೆನ್ನೂರು ಭಾಗದಲ್ಲಿ ಪ್ರಗತಿ ಕೊಂಚ ಕುಂಠಿತವಾಗಿದೆ. ಬಾಕಿ ಇರುವ ತೆರಿಗೆಯನ್ನು ಶೀಘ್ರವಾಗಿ ವಸೂಲಿ ಮಾಡಲು ಕ್ರಮವಹಿಸುವಂತೆ ಸೂಚಿಸಿದರು.

ಸಾರ್ವಜನಿಕರಿಂದ ಮುಖ್ಯವಾಗಿ ಇ-ಸ್ವತ್ತು, ಖಾತಾ ಬದಲಿವಣೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿವೆ. ನಿಗದಿತ ಕಾಲಮಿತಿಯೊಳಗೆ ಇವುಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮವಹಿಸುವಂತೆ ತಿಳಿಸಿದರು.

ಜೂನ್ 16 ರಂದು ಹಸಿರೀಕರಣ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ವಿಸ್ತೃತ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳ ಉದ್ಯೋಗ, ಸಾಲ ಸೌಲಭ್ಯ ಹಾಗೂ ತಂತ್ರಜ್ಞಾನದ ನೆರವಿಗಾಗಿ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತೆರಿಗೆ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ 18 ಮಂದಿ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅರ್ಹ ಫಲಾನುಭವಿಗಳಿಗೆ ವಿಶೇಷಚೇತನ ಮಕ್ಕಳಿಗೆ ಬ್ರೈಲ್ ಉಪಕರಣಗಳು, ಉದ್ಯೋಗ ಅವಕಾಶಕ್ಕಾಗಿ ಲ್ಯಾಪ್‌ಟಾಪ್‌ಗಳು, ಹೊಲಿಗೆ ಯಂತ್ರಗಳು ಹಾಗೂ ಚಲನವಲನದ ನೆರವಿಗಾಗಿ ವ್ಹೀಲ್ ಚೇರ್ ಮತ್ತು ವಿಶೇಷ ವಾಹನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಎನ್. ಮಹಾಂತೇಶ್, ರೆವಿನ್ಯೂ ಆಯುಕ್ತ ಉದಯ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ರೇಣುಕಾ, ಯೋಜನಾ ನಿರ್ದೇಶಕ ಜಿ.ಟಿ.ವೀರೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

- - -

(ಕೋಟ್‌) ನಮ್ಮ ಮನೆ, ನಮ್ಮ ಡ್ರಾಯಿಂಗ್ ರೂಮ್ ಸ್ವಚ್ಛವಾಗಿದ್ದರೆ ಸಾಲದು, ಇಡೀ ನಗರವೇ ನಮ್ಮ ಮನೆ ಎಂದು ಭಾವಿಸಬೇಕು ಎಂಬ ಉದ್ದೇಶದೊಂದಿಗೆ ಪಿಪಿಪಿ ಮಾದರಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛತಾ ಆಂದೋಲನವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ. ನಾಗರೀಕರಲ್ಲಿ ಜವಾಬ್ದಾರಿಯುತ ನಡವಳಿಕೆ ಮೂಡಿಸಲು ಪ್ರತಿ ವಾರ್ಡ್‌ಗಳಲ್ಲೂ ಸಾರ್ವಜನಿಕರನ್ನು ಒಳಗೊಂಡ ''''ಕ್ಲೀನ್‌ಲಿನೆಸ್ ಡ್ರೈವ್'''' (ಸ್ವಚ್ಛತಾ ಅಭಿಯಾನ) ಹಮ್ಮಿಕೊಳ್ಳಲಾಗುವುದು.

- ಡಾ.ಪ್ರಭಾ ಮಲ್ಲಿಕಾರ್ಜುನ್‌, ಸಂಸದೆ.

- - -

-27ಕೆಡಿವಿಜಿ33:

ದಾವಣಗೆರೆಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ ಮತು ಪ್ರಗತಿ ಸಾಧಿಸಿರುವ ಅಧಿಕಾರಿ/ ನೌಕರರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಪಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೈಲ, ಗೊಬ್ಬರ, ಬಿತ್ತನೆ ಬೀಜ ಬೆಲೆ ಏರಿಕೆಗೆ ರೈತರ ಆಕ್ರೋಶ
ಅರಣ್ಯ ಇಲಾಖೆ ಜಾಗದಲ್ಲಿರುವ ಶಾಲೆಗಳ ಬಗ್ಗೆ ಮಾಹಿತಿ ನೀಡಲು ತಾಪಂ ಆಡಳಿತಾಧಿಕಾರಿ ಸೂಚನೆ