ಕಾಲಮಿತಿಯಲ್ಲಿ ಜನರ ಬೇಡಿಕೆಗಳಿಗೆ ಸ್ಪಂದನೆ: ಶಾಸಕ

KannadaprabhaNewsNetwork | Published : Jul 22, 2024 1:27 AM

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲದಲ್ಲಿ ಶಾಸಕ ಧೀರಜ್ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದು-ಕೊರತೆ, ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲದಲ್ಲಿ ಶಾಸಕ ಧೀರಜ್ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದು-ಕೊರತೆ, ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಮಧುರೆ ಹೋಬಳಿಯಲ್ಲಿ ನಡೆದಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ 146 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 60 ಕಂದಾಯ ಇಲಾಖೆಗೆ ಸಂಬಂಧಿಸಿದ್ದವು. ಇದರಲ್ಲಿ 35 ಅರ್ಜಿ ಇತ್ಯರ್ಥ ಪಡಿಸಲಾಗಿದೆ. ಉಳಿದವುಗಳಿಗೆ ಒಂದಿಷ್ಟು ಕಾಲಮಿತಿ ಹಾಗೂ ನ್ಯಾಯಾಲಯ ಸೂಚನೆ ಅಗತ್ಯವಿದೆ ಎಂದರು.ಜನಸ್ಪಂದನದಲ್ಲಿ ಸಲ್ಲಿಸುವ ಅರ್ಜಿಗಳು ಕಸದ ಬುಟ್ಟಿ ಸೇರುತ್ತವೆ. ಕೆಲಸ ಆಗುವುದಿಲ್ಲ ಎನ್ನುವ ಸಾರ್ವಜನಿಕರ ಅಭಿಪ್ರಾಯ ಬದಲಿಸುವ ಉದ್ದೇಶದಿಂದಲೇ ಇಲ್ಲಿ ಜನರು ನೀಡುವ ಕುಂದು ಕೊರತೆ ಅರ್ಜಿಗಳ ಇತ್ಯರ್ಥಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದರು.

ನಾಡಕಚೇರಿಯಲ್ಲಿ ಸಿಬ್ಬಂದಿ ಕೊರತೆ:

ದೊಡ್ಡಬೆಳವಂಗಲ ನಾಡ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ರೈತರು ಪಹಣಿಯಿಂದ ಮೊದಲು ಗೊಂಡು ನಾಡ ಕಚೇರಿಯಿಂದ ಆನ್‌ಲೈನ್ ಮೂಲಕ ಯಾವುದೇ ಪತ್ರ ಪಡೆಯಲು ದಿನಗಟ್ಟಲೇ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಸೂಕ್ತ ಸಿಬ್ಬಂದಿ ನಿಯೋಜಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯ ರೈತರಾದ ನಾರಾಯಣಪ್ಪ, ನಂಜಪ್ಪ ಶಾಸಕರಿಗೆ ಮನವಿ ಸಲ್ಲಿಸಿದರು.

ಸಮರ್ಪಕ ಬಸ್‌ ವ್ಯವಸ್ಥೆಗೆ ಮನವಿ:

ದೊಡ್ಡಬೆಳವಂಗಲ ಹೋಬಳಿ ಕೇಂದ್ರದಿಂದ ಹಲವು ಗ್ರಾಮಗಳ ಮೂಲಕ ಕೊರಟಗೆರೆ ತಾಲೂಕಿನ ಕೋಳಾಲದ ಕಡೆಗೆ ಬಸ್ ಸಂಚಾರ ಇಲ್ಲದಾಗಿದೆ. ಈ ಭಾಗದ ರೈತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇವೆ ಪ್ರಾರಂಭಿಸಬೇಕು ಎಂದು ರೈತ ಮಹೇಂದ್ರ ಮನವಿ ಸಲ್ಲಿಸಿದರು.

ಹೋಬಳಿಯನ್ನು ಕಸದ ತೊಟ್ಟಿ ಮಾಡದಿರಿ:

ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ದೊಡ್ಡಬೆಳವಂಗಲ ಗ್ರಾಮದ ವಿಜಯಕುಮಾರ್, ಸಿ.ಎಚ್.ರಾಮಕೃಷ್ಣ, ತಾಲೂಕನ್ನು ಬಿಬಿಎಂಪಿ ಕಸದ ತೊಟ್ಟಿಯಾಗಿ ಮಾಡಲು ಮುಂದಾಗಿದೆ. ಈಗಾಗಲೇ ದೊಡ್ಡಬೆಳವಂಗಲ ಹೋಬಳಿ ಚಿಗರೇನಹಳ್ಳಿಯಲ್ಲಿ ಬಿಬಿಎಂಪಿ ಕಸದಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ ಎಂದರು.

ಈಗ ಇದೇ ಹೋಬಳಿಯಲ್ಲಿ ಮತ್ತೊಂದು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಪ್ರಕಟಗೊಂಡಿವೆ. ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು. ಹೋಬಳಿಗೆ ಅತ್ಯಂತ ಕೆಟ್ಟ ಪರಿಣಾಮ ಬೀರಿದ್ದ ಟೆರ್ರಾಫಾರಂ ಬಿಬಿಎಂಪಿ ಕಸ ವಿಲೇವಾರಿ ಘಟಕವನ್ನು ಸತತ ಪ್ರತಿಭಟನೆ ನಂತರ ಬಂದ್ ಮಾಡಿಸಲಾಗಿದೆ. ಈಗ ಚಿಗರೇನಹಳ್ಳಿ ಸಮೀಪ ಇರುವ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ಅವಾಂತರ ಮಿತಿ ಮೀರಿದೆ. ಈ ಭಾಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ಮೂರನೇ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.120 ಅರ್ಜಿ ಸ್ವೀಕಾರ:ಜನಸ್ಪಂದನ ದಲ್ಲಿ 120 ಅರ್ಜಿ ಸಲ್ಲಿಕೆಯಾಗಿವೆ. ಕಂದಾಯ ಇಲಾಖೆಗೆ ಸೇರಿದ ಕುಂದು ಕೊರತೆ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದವು.

ಕಾರ್ಯಕ್ರಮದಲ್ಲಿ ತಹಸೀಲ್ದಾ‌ರ್ ವಿಭಾ ವಿದ್ಯಾರಾಥೋಡ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜ್, ಇನ್‌ಸ್ಪೆಕ್ಟರ್ ಎಂ.ಬಿ.ನವೀನ್‌ ಕುಮಾರ್, ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧಾ, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಕ್ಕ, ತಿಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನರಾಮಯ್ಯ, ದೊಡ್ಡಬೆಳವಂಗಲ ಉಪ ತಹಶೀಲ್ದಾರ್ ಶಿವಮೂರ್ತಿ ಇತರರಿದ್ದರು.

ಬಾಕ್ಸ್...............

ಪಂಚಾಯಿತಿ ಸದಸ್ಯರಿಂದ ಮನವಿಹಣಬೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವ ಮೂಲಕ ಪಂಚಾಯಿತಿಯಲ್ಲಿನ ಕೆಲಸ ಸುಗಮವಾಗಿ ನಡೆಯುವಂತೆ ಮಾಡಬೇಕು. ಗ್ರಾಮದ ಸರ್ವೆ ನಂಬರ್ 262ರಲ್ಲಿ ಹಲವು ಜನರಿಗೆ ಆಶ್ರಯ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ಮಂಜೂರಾಗಿದೆ. ಮನೆಗಳನ್ನು ಕಟ್ಟಿಕೊಂಡು ದಶಕಗಳಿಂದಲೂ ವಾಸವಾಗಿದ್ದಾರೆ. ಆದರೆ, ಈ ನಿವೇಶನ ಇರುವ ಜಮೀನಿನ ಪಹಣಿಯಲ್ಲಿ ಮಾತ್ರ ''''''''ಸರ್ಕಾರ'''''''' ಎಂದು ನಮೂದಾಗಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಸೂಕ್ತ ದಾಖಲಾತಿ ಇಲ್ಲದಾಗಿದೆ. ಪಂಚಾಯಿತಿ ವತಿಯಿಂದ ಇ-ಖಾತೆ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಪಹಣಿಯಲ್ಲಿ ಸರ್ಕಾರಿ ಬದಲಿಗೆ ಆಶ್ರಯ ಎಂದು ಬದಲಾಯಿಸಬೇಕೆಂದು ಪಂಚಾಯಿತಿ ಸದಸ್ಯರು ಶಾಸಕ ಧೀರಜ್ ಮುನಿರಾಜ್ ಅವರಿಗೆ ಮನವಿ ಸಲ್ಲಿಸಿದರು.

21ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

21ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಮಾತನಾಡಿದರು.

Share this article