ಸಾರಾಂಶ
ಮಲ್ಟಿಪೆಕ್ಸ್‌ಗಳಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್ ಸೇರಿ ಕುಡಿಯುವ ನೀರು, ತಿಂಡಿ ತಿನಿಸುಗಳ ದುಬಾರಿ ಬೆಲೆಯ ವಿಷಯದಲ್ಲಿ ಮಾತ್ರ ಜಾಣ ಮೌನ ವಹಿಸಿರುವುದು ಸಿನಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು : ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ₹200 ಗರಿಷ್ಠ ಮಿತಿಯನ್ನು ಸರ್ಕಾರ ವಿಧಿಸಿದೆ. ಆದರೆ, ಸಿನಿಮಾ ನೋಡಲು ಹೋಗುವವರನ್ನು ಲೂಟಿ ಮಾಡಲೋ ಎಂಬಂತೆ ಮಲ್ಟಿಪೆಕ್ಸ್‌ಗಳಲ್ಲಿ ಮಾರಾಟ ಮಾಡುವ ಪಾಪ್‌ಕಾರ್ನ್ ಸೇರಿ ಕುಡಿಯುವ ನೀರು, ತಿಂಡಿ ತಿನಿಸುಗಳ ದುಬಾರಿ ಬೆಲೆಯ ವಿಷಯದಲ್ಲಿ ಮಾತ್ರ ಜಾಣ ಮೌನ ವಹಿಸಿರುವುದು ಸಿನಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ಟಿಕೆಟ್ ದರ ನಿಗದಿ ನಂತರ ಇದೀಗ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗಿಂತ ಪಾಪ್ ಕಾರ್ನ್ ಬೆಲೆ ವಿಪರೀತವಾಗಿದೆ. ಮಲ್ಟಿಪ್ಲೆಕ್ಸ್ ಆವರಣದಲ್ಲಿನ ಮಳಿಗೆಗಳಲ್ಲಿನ ಪಾನೀಯ, ತಿನಿಸುಗಳ ದರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ದರಕ್ಕೆ ಸಮವಾಗಿರುತ್ತದೆ. ಮಲ್ಟಿಪ್ಲೆಕ್ಸ್ ಆವರಣದಲ್ಲಿ ಮಾರಾಟವಾಗುವ ಪಾಪ್‌ಕಾರ್ನ್ ದರ ಸರಾಸರಿ ₹250 ರಿಂದ ಆರಂಭವಾದರೆ, ಒಂದು ಪೊಟ್ಟಣದಲ್ಲಿ ನೀಡುವ ನಾಚೋಸ್ ಸರಾಸರಿ ₹240 ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಕಾಫಿ-ಟೀ ಕೂಡ 150 ರು.ಗಿಂತ ಕಡಿಮೆ ಇಲ್ಲ. ಒಂದು ಲೀಟರ್ ನೀರಿನ ದರ ₹60 ರಿಂದ ಆರಂಭವಾಗಿ ₹120 ರವರೆಗೂ ಮಾರಾಟವಾಗುತ್ತದೆ. ಅರ್ಧ ಲೀಟರ್ ಪೆಪ್ಸಿಯನ್ನು ₹310 ಹಾಗೂ ಮೇಲ್ಪಟ್ಟ ದರಕ್ಕೆ ಮಾರಲಾಗುತ್ತಿದೆ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಸಿನಿಮಾ ನೋಡಿ ಸಂತೋಷಪಡಲು ಬರುವ ಸಿನಿಮಾ ವೀಕ್ಷಕರಿಗೆ ದುಬಾರಿ ಬೆಲೆ ವಿಧಿಸುವ ಮೂಲಕ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಸಿನಿಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಟುಂಬದೊಂದಿಗೆ, ಮಕ್ಕಳೊಂದಿಗೆ ಥಿಯೇಟರ್‌ಗೆ ಬಂದಾಗ ಏನಾದರೂ ತಿನ್ನಬೇಕೆನಿಸುವುದು ಸಹಜ. ಆದರೆ, ಮೆನುಗಳಲ್ಲಿ ತಿಂಡಿ-ತಿನಿಸಿನ ಬೆಲೆ ನೋಡಿದಾಗ ಶಾಕ್ ಆಗುತ್ತದೆ. ಒಂದು ಲೀಟರ್ ಕುಡಿಯುವ ನೀರಿನ ಬಾಟಲ್ ಕೂಡ ದುಬಾರಿ ಬೆಲೆಗೆ ಮಾರಲಾಗುತ್ತಿದೆ. ಟಿಕೆಟ್ ದರ ₹200ಕ್ಕೆ ಮಿತಿಗೊಳಿಸಿರುವುದು ಒಳ್ಳೆಯ ನಿರ್ಧಾರ. ಹಾಗೆಯೇ ತಿನಿಸು, ಪಾನೀಯಗಳ ದರದ ಮೇಲೂ ನಿಯಂತ್ರಣ ಅಗತ್ಯವಿದೆ ಎಂದು ಸಿನಿ ಪ್ರಿಯ ಸಂಜಯ್ ಕೆಂಗೊಂಡ್ ಅಭಿಪ್ರಾಯಪಟ್ಟರು.
ಮಲ್ಟಿಪ್ಲೆಕ್ಸ್ ಆವರಣದಲ್ಲಿನ ಮಳಿಗೆಗಳಲ್ಲಿ ಮಾರಾಟ ಮಾಡುವ ತುಂಪು ಪಾನೀಯ, ತಿನಿಸುಗಳು ಮಧ್ಯಮ ವರ್ಗ ಸೇರಿ ಎಲ್ಲಾ ಸಿನಿಮಾ ಪ್ರಿಯರ ಕೈಗೆಟುವಂತಿರಬೇಕು. ಇದರಿಂದ ಹೆಚ್ಚೆಚ್ಚು ಜನ ಚಿತ್ರಮಂದಿರಗಳ ಕಡೆ ಬರುತ್ತಾರೆ. ಇದರಿಂದ ಸಿನಿಮಾ ಪ್ರದರ್ಶಕರು, ನಿರ್ಮಾಪಕರಿಗೆ ಉತ್ತಮ ಆದಾಯ ಬರುತ್ತದೆ. ಮಲ್ಟಿಪ್ಲೆಕ್ಸ್‌ಗಳು ಈ ದೃಷ್ಟಿಯಿಂದಲೂ ನೋಡಬೇಕು. ಟಿಕೆಟ್ ದರದಂತೆ ತಿನಿಸುಗಳ ದರ ಕೂಡ ಕೈಗೆಟುಕುವಂತಿರಬೇಕು ಎಂದು ಚಲನಚಿತ್ರ ಕಾರ್ಯಕ್ರಮಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸುಧೀಂದ್ರ ವೆಂಕಟೇಶ್ ಹೇಳಿದರು.
ಜಾಲತಾಣಗಳಲ್ಲಿ ಪಾಪ್‌ಕಾರ್ನ್ ದರ ಟ್ರೋಲ್:
ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರಕ್ಕೆ ನಿಯಂತ್ರಣ ಹಾಕಿದರೇನಂತೆ, ಮಳಿಗೆಗಳಲ್ಲಿ ಮಾರುವ ಪಾಪ್‌ಕಾರ್ನ್ ಮೂಲಕ ವ್ಯತ್ಯಾಸದ ಹಣ ಸರಿಪಡಿಸಿಕೊಳ್ಳಲಾಗುತ್ತದೆ. ಟಿಕೆಟ್ ದರ ₹200 ಇದ್ದರೆ, ತಿಂಡಿ-ತಿನಿಸುಗಳು ಅದರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಅನೇಕರು ಮಲ್ಟಿಪ್ಲೆಕ್ಸ್ ಮಳಿಗೆಗಳಲ್ಲಿನ ತಿನಿಸುಗಳ ದರದ ಕುರಿತು ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
ತಿಂಡಿ ತಿನಿಸುಗಳ ದರ ಹೋಲಿಕೆ, (ಬುಕ್ ಮೈ ಶೋ ಪ್ರಕಾರ ಮಲ್ಟಿಪ್ಲೆಕ್ಸ್ ಪಿವಿಆರ್ ಮಳಿಗೆಗಳು ಮತ್ತು ಸಾಮಾನ್ಯ ಸರಾಸರಿ ದರ)
ಓರಾಯನ್ ಮಾಲ್ ಮಲ್ಟಿಪ್ಲೆಕ್ಸ್, ಯಶವಂತಪುರ
ರೆಗ್ಯುಲರ್ ಸಾಲ್ಟೆಡ್ ಪಾಪ್‌ಕಾರ್ನ್ - ₹370, ಸಾಮಾನ್ಯ ದರ- ₹20ರಿಂದ ₹40
ರೆಗ್ಯುಲರ್ ಪೆಪ್ಸಿ 540 ಎಂ.ಎಲ್ - ₹310, ಸಾಮಾನ್ಯ ದರ ₹45
ಗ್ಲೋಬಲ್ ಮಾಲ್, ಮೈಸೂರು ರಸ್ತೆ
ನಾಚೋಸ್, 90 ಗ್ರಾಂ- ₹240, ಸಾಮಾನ್ಯ ದರ ₹60ರಿಂದ ₹80
ಪನೀರ್ ಬರ್ಗರ್- ₹230, ಸಾಮಾನ್ಯ ದರ- ₹75
ವೈಷ್ಣವಿ ಸಫೈರ್ ಮಾಲ್, ತುಮಕೂರು ರಸ್ತೆ
ಕೋಸ್ಟಾ ಹಾಟ್ ಚಾಕೋಲೆಟ್ ಕಾಫಿ- ₹360, ಸಾಮಾನ್ಯ ದರ ₹285
ಪನೀರ್ ಸ್ಯಾಂಡ್‌ವಿಚ್ 190 ಗ್ರಾಂ ₹290, ಸಾಮಾನ್ಯ ದರ ₹120
ನೀರು ₹60ರಿಂದ ₹120
ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ನೀರಿನ ದರ ₹60ರಿಂದ ₹120ಕ್ಕೆ ಮಾರಲಾಗುತ್ತದೆ. ಆದರೆ, ಸಾಮಾನ್ಯವಾಗಿ ₹15ರಿಂದ ₹20ಕ್ಕೆ ಲಭ್ಯವಿದೆ.