ಹುಬ್ಬಳ್ಳಿ:
ಮಹದಾಯಿ ನೀರು ಹಂಚಿಕೆಯಾಗಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯಲೆಂದು. 3.9 ಟಿಎಂಸಿ ನೀರು ಹಂಚಿಕೆಯಾಗಿದೆ. ಅತ್ತ ನರಗುಂದ- ನವಲಗುಂದದಲ್ಲಿ ರೈತರು 11 ವರ್ಷದಿಂದಲೂ ಹೋರಾಟ ಮಾಡುತ್ತಿದ್ದಾರೆ. ಆದರೆ ಮಹಾನಗರಕ್ಕೆ ಹಂಚಿಕೆಯಾಗಿರುವ ನೀರನ್ನು ತರುವ ಕುರಿತಂತೆ ಈವರೆಗೂ ಪಾಲಿಕೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಸಾಮಾನ್ಯಸಭೆಯಲ್ಲೂ ಈ ಬಗ್ಗೆ ಚರ್ಚೆ ಕೂಡ ನಡೆದಿಲ್ಲ. ಪಾಲಿಕೆ ಈಗಲೂ ಕೃಷಿಗಾಗಿ ಮೀಸಲಿದ್ದ ನೀರನ್ನೇ ಬಳಸುತ್ತಿದೆ. ಆದಕಾರಣ ಪಾಲಿಕೆಯ ಮುಂದಿನ ಹೆಜ್ಜೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ರೈತ ಸೇನಾ ಆಗ್ರಹಿಸಿತ್ತು.
ಈ ಹಿನ್ನೆಲೆಯಲ್ಲಿ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ರೈತ ಸೇನಾ ಕರ್ನಾಟಕ ಸಂಘಟನೆಯ ರೈತ ಮುಖಂಡರ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಮಹದಾಯಿ ಮತ್ತು ಕಳಸಾ, ಬಂಡೂರಿ ಯೋಜನೆ, ನವಿಲುತೀರ್ಥ ಜಲಾಶಯದ ನೀರಿನ ಬಳಕೆ, ಅವಳಿ ನಗರದ ಕುಡಿಯುವ ನೀರಿನ ಅವಲಂಬನೆ ಹಾಗೂ ರೈತರ ನೀರಾವರಿ ಹಕ್ಕುಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.ಮಹದಾಯಿ ಮತ್ತು ಕಳಸಾ, ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಹು–ಧಾ ಮಹಾನಗರ ಪಾಲಿಕೆ ಯಾವ ರೀತಿ ಬೆಂಬಲ ನೀಡಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ದುರ್ಗಮ್ಮ ಬಿಜವಾಡ ಅವರು, ಪಾಲಿಕೆಯ ಎಲ್ಲ ಸದಸ್ಯರು, ಸ್ಥಳೀಯ ಶಾಸಕರು, ಸಚಿವರು ಹಾಗೂ ಮಹದಾಯಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಲಾಗುವುದು. ಈ ಕುರಿತು ನಾಲ್ಕು ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.ರೈತ ಸೇನಾ ಸಂಘಟನೆ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ‘ಕೃಷಿ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ಅಡ್ಡಲಾಗಿ ನವಿಲುತೀರ್ಥ ಆಣೆಕಟ್ಟು ನಿರ್ಮಿಸಲಾಗಿದ್ದು, ಇದಕ್ಕಾಗಿ 36 ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯರ ಗಮನಕ್ಕೆ ತರದೆ ಹು–ಧಾ ಮಹಾನಗರಕ್ಕೆ ನೀರು ಪೂರೈಸುವ ವ್ಯವಸ್ಥೆ ಅನುಷ್ಠಾನಗೊಳಿಸಲಾಯಿತು. ಇದರಿಂದ ಜಲಾಶಯದ ಮೂಲ ಉದ್ದೇಶವೇ ದಿಕ್ಕುತಪ್ಪಿ, ಸುತ್ತಲಿನ ರೈತರು ಕೃಷಿಗೆ ನೀರಿಲ್ಲದೆ ಪರದಾಡುವಂತಾಗಿದೆ’ ಎಂದರು.ಜಲಾಶಯದ ನೀರು ಯಾವ ವರ್ಷದಿಂದ, ಎಷ್ಟು ಬಳಕೆಯಾಗುತ್ತಿದೆ, ಕೈಗಾರಿಕೆಗಳಿಗೆ ಎಷ್ಟು ನೀರು ನೀಡಲಾಗುತ್ತಿದೆ, ಈ ಹಂಚಿಕೆಗೆ ಯಾರು ನಿರ್ದೇಶನ ನೀಡಿದ್ದಾರೆ. ಯಾವ ಯಾವ ನಗರಗಳಿಗೆ ನೀರು ಪೂರೈಸಲಾಗುತ್ತಿದೆ ಎನ್ನುವ ಸಂಪೂರ್ಣ ಮಾಹಿತಿ ಸಭೆಗೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಈ ಸಮಯದಲ್ಲಿ ನವಿಲುತೀರ್ಥ ಜಲಾಶಯದಲ್ಲಿ 34 ಟಿಎಂಸಿ ನೀರು ಸಂಗ್ರಹವಿತ್ತು. ಪ್ರಸ್ತುತ 15 ಟಿಎಂಸಿ ಮಾತ್ರ ಇದ್ದು, ಶೇ.60ರಷ್ಟು ಇಳಿಕೆಯಾಗಿದೆ. ಸವದತ್ತಿಯಿಂದ ನಗರಕ್ಕೆ ನೀರು ಬರುವ ಮಾರ್ಗ ಮಧ್ಯದ 27 ಹಳ್ಳಿಗಳಿಗೂ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಮಹದಾಯಿಯಿಂದ ಅವಳಿನಗರಕ್ಕೆ ಕುಡಿಯುವ ನೀರಿಗಾಗಿ 3.9 ಟಿಎಂಸಿ ನೀರು ಹಂಚಿಕೆಯಾಗಿದೆ. ಅದನ್ನು ಬಳಸಿಕೊಳ್ಳುವ ಕುರಿತು ಪಾಲಿಕೆ ನಿರ್ಧಾರ ಪ್ರಕಟಿಸಬೇಕು. ಡಿ.6ರೊಳಗೆ ಪಾಲಿಕೆ ಸಭೆ ಕರೆದು ನಿರ್ಣಯ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಪಾಲಿಕೆ ಆವರಣದಲ್ಲೇ ನಿರಂತರ ನಿರಶನ ನಡೆಸಲಾಗುವುದು.
ಮಹದಾಯಿಯಿಂದ ಲಾಭ ಆಗುವುದು ಹುಬ್ಬಳ್ಳಿ-ಧಾರವಾಡಕ್ಕೆ. ಅಲ್ಲಿನ ನೀರು ಬಂದರೆ ಈಗ ನೀವು ಬಳಸುತ್ತಿರುವ ನೀರು ಕೃಷಿಗೆ ಸಿಗುತ್ತದೆ ಎಂಬ ಲೆಕ್ಕ ನಮ್ಮದು. ಒಂದು ವೇಳೆ ಪಾಲಿಕೆ ಕ್ರಮ ಕೈಗೊಳ್ಳದಿದ್ದಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಬಿಡದೇ ಹೋರಾಟ ಮಾಡುತ್ತೇವೆ.
ದುರ್ಗಮ್ಮ ಬಿಜವಾಡ, ಮೇಯರ್