ಧರ್ಮಸ್ಥಳ ಸಂಸ್ಥೆಯಿಂದ ಅಟ್ಟೂರು ಕೆರೆಯ ಪುನಶ್ಚೇತನ, ಹಸ್ತಾಂತರ

KannadaprabhaNewsNetwork | Published : Jul 19, 2024 12:46 AM

ಸಾರಾಂಶ

ಊರು ಕಟ್ಟುವ ಮೊದಲು ಕೆರೆಯನ್ನು ಕಟ್ಟು ಎನ್ನುವ ಪೂರ್ವಜರ ಗಾದೆ ಮಾತಿನಂತೆ ಕೆರೆ ಎನ್ನುವುದು ಜನರ ಜೀವನಾಡಿ. ಒಂದು ಊರು ಸಮೃದ್ಧಿಯಾಗಬೇಕಾದರೆ ಅಲ್ಲಿ ಒಂದು ಕೆರೆ ಇರಲೇಬೇಕು.

ಚಿಂತಾಮಣಿ: ತಾಲೂಕಿನ ಕೈವಾರ ವಲಯದ ಅಟ್ಟೂರಿನಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ಅಟ್ಟೂರು ಕೆರೆಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಮುಖಂಡರು, ದಾನಿ ವೆಂಕಟೇಶಪ್ಪ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದಂಪತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಯಾವುದೇ ಸರ್ಕಾರ ಮಾಡದ ಜನಪರ ಕಾರ್ಯಕ್ರಮಗಳನ್ನು ಹೆಗ್ಗಡೆ ದಂಪತಿಯು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿದ್ದು ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕ ಸಿ. ಪ್ರಶಾಂತ್ ಮಾತನಾಡಿ, ಊರು ಕಟ್ಟುವ ಮೊದಲು ಕೆರೆಯನ್ನು ಕಟ್ಟು ಎನ್ನುವ ಪೂರ್ವಜರ ಗಾದೆ ಮಾತಿನಂತೆ ಕೆರೆ ಎನ್ನುವುದು ಜನರ ಜೀವನಾಡಿ. ಒಂದು ಊರು ಸಮೃದ್ಧಿಯಾಗಬೇಕಾದರೆ ಅಲ್ಲಿ ಒಂದು ಕೆರೆ ಇರಲೇಬೇಕು ಎಂದು ತಿಳಿಸಿದರು.

ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಇದುವರೆಗೆ ರಾಜ್ಯಾದ್ಯಂತ ಒಟ್ಟು ೭೮೪ ಕೆರೆಗಳನ್ನು ಪುನಶ್ಚೇತನ ಗೊಳಿಸಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಒಂದರಲ್ಲಿ ೨೫ ಕೆರೆಗಳ ಪುನಶ್ಚೇತನಗೊಳಿಸಲಾಗಿದೆ ಎಂದು ತಿಳಿಸಿ, ಅಲ್ಲದೇ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆ ಸಮಿತಿಯ ಅಧ್ಯಕ್ಷ ಶಿವಶಂಕರ್ ವಹಿಸಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಂತಾಮಣಿ ತಾಲೂಕಿನ ಯೋಜನಾಧಿಕಾರಿ ವಿನೋದ್ ಹಾಗೂ ತಾಲೂಕಿನ ಕೃಷಿ ಮೇಲ್ವಿಚಾರಕ ಹರೀಶ್, ಗ್ರಾಮ ಪಂಚಾಯಿತಿಯ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಮಾಜಿ ಸದಸ್ಯ ಅಚ್ಚಪ್ಪ, ಮುಖಂಡರಾದ ವೆಂಕಟೇಶಪ್ಪ, ಸೋಮಶೇಖರ್ ಹಾಗೂ ವಲಯದ ಮೇಲ್ವಿಚಾರಕರಾದ ಶಿವರಾಜು, ವಲಯದ ಸೇವಾ ಪ್ರತಿನಿಧಿಗಳಾದ ನೇತ್ರಾವತಿ, ಎಂ.ಗೀತಾ, ಭವಾನಿ ದಿವ್ಯ, ಚೈತ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಟ್ಟೂರು ಕೆರೆಗೆ ಭಾಗಿನವನ್ನು ಅರ್ಪಿಸಲಾಯಿತು. ನಂತರದಲ್ಲಿ ಕೆರೆ ಅಂಗಳದಲ್ಲಿ ಗಿಡಗಳ ನಾಟಿ ಮಾಡಲಾಯಿತು ಹಾಗೂ ಆಗಮಿಸಿರುವ ಸದಸ್ಯರಿಗೆ ಗಿಡ ವಿತರಿಸಲಾಯಿತು.

Share this article