ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಳೆದ ಅವಧಿಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿನ ದೇವಸ್ಥಾನ, ಸಮುದಾಯ ಜೀರ್ಣೋದ್ಧಾರ ಸಲುವಾಗಿ ₹ ೧೦ ಕೋಟಿ ವೆಚ್ಚದ ಕಾಮಗಾರಿ ಮಂಜೂರು ತಡೆ ಹಿಡಿಯಲು ಕಾಂಗ್ರೆಸ್ ಸರ್ಕಾರ ಕಾರಣ. ಸರ್ಕಾರ ಬದಲಾಗಿದೆ ಇನ್ಮೇಲೆ ದೇವಸ್ಥಾನ, ಸಮುದಾಯ ಭವನಗಳು ಅಭಿವೃದ್ಧಿ ಬದಲಾಗಿ, ಮಸೀದಿಗಳ ಜೀರ್ಣೋದ್ಧಾರವಾಗುತ್ತವೆ ಎಂದು ಶಾಸಕ ಸಿದ್ದು ಸವದಿ ಟೀಕಿಸಿದರು.ಬನಹಟ್ಟಿಯಲ್ಲಿ ಬುಧವಾರ ಹಳೆ ಯಲ್ಲಮ್ಮದೇವಿ ದೇವಸ್ಥಾನದ ಸಮುದಾಯ ಭವನ ಹಾಗೂ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ರಾಜ್ಯದ ಅನುದಾನಗಳಿಂದ ನಡೆಯುತ್ತಿರುವ ಕಾಮಗಾರಿಗಳೆಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದವು. ಈಗಿನ ಸರ್ಕಾರದಿಂದ ನಯಾ ಪೈಸೆ ಅನುದಾನ ಬರದಿರುವುದು ಸಿದ್ಧರಾಮಯ್ಯ ಸರ್ಕಾರದ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಲೇವಡಿ ಮಾಡಿದರು.
ಕ್ಷೇತ್ರದಲ್ಲಿ ಸಮುದಾಯ ಭವನ ಸೇರಿದಂತೆ ಇತರೆ ಕಾಮಗಾರಿಗಳೆಲ್ಲವೂ ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಟ್ರಸ್ಟ್‌ಗಳಿಗೆ ಸಹಕಾರಿಯಾಗುವ ಬದಲು ಕಾಂಗ್ರೆಸ್ ಸರ್ಕಾರ ಮಾರಕವಾಗಿದೆ ಎಂದು ಸವದಿ ಆರೋಪಿಸಿದರು.ಶಾಸಕನಾಗಿ ನನ್ನ ಅವಧಿಯಲ್ಲಿ ₹೧೦೦ ಕೋಟಿಗಳಷ್ಟು ಸಮುದಾಯ ಭವನ ಸೇರಿ ವಿವಿಧ ಯೋಜನೆಗಳಿಗೆ ಅನುದಾನ ಒದಗಿಸುವಲ್ಲಿ ತೃಪ್ತಿ ಹೊಂದಿದ್ದೇನೆ. ಈ ಕುಂಠಿತಕ್ಕೆ ಸರ್ಕಾರದ ಅಸಹಕಾರವೇ ಕಾರಣ ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ಸಮುದಾಯ ಭವನಗಳು ಬಡ ರೈತ ಹಾಗೂ ನೇಕಾರ ಸಮುದಾಯಗಳ ಕಾರ್ಯಕ್ರಮಗಳಿಗೆ ಸಹಾಯವಾಗಲಿವೆ ಎಂದು ಹೇಳಿದರು.ತಹಸೀಲ್ದಾರ್ ಗಿರೀಶ ಸ್ವಾದಿ, ಪೌರಾಯುಕ್ತ ಜಗದೀಶ ಈಟಿ, ಸಿದ್ಧನಗೌಡ ಪಾಟೀಲ, ಜಯಶ್ರೀ ಬಾಗೇವಾಡಿ, ಗಂಗಪ್ಪ ಮುಗತಿ, ರವಿ ಅಬಕಾರ, ಮಹೇಶ ಮುಗತಿ, ಗೋವಿಂದ ಪಾತ್ರೋಟ, ಈಶ್ವರ ಪೂಜಾರಿ, ನವೀನ ಬಣಕಾರ, ಸೋಮು ಅಬಕಾರ, ಸಿದ್ದು ಶೀಲವಂತ, ಪರಪ್ಪ ಮುಗತಿ, ದುಂಡಪ್ಪ ಕರಲಟ್ಟಿ, ದುಂಡಯ್ಯ ಕಾಡದೇವರ, ನಿಜು ಮುಗತಿ ಸೇರಿದಂತೆ ಅನೇಕರಿದ್ದರು.
--------