ಕನ್ನಡಪ್ರಭ ವಾರ್ತೆ ಹಾಸನ
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪಿ ಅಂಡ್ ಟಿ ಕಾಲೋನಿಯಲ್ಲಿ 1986ರಲ್ಲಿ ಸ್ಥಾಪನೆಯಾದ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನವು ಹಲವು ವರ್ಷಗಳಿಂದ ಭಕ್ತರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಬೆಳೆದುಬಂದಿದೆ. ಕಾಲಕ್ರಮೇಣ ದೇವಸ್ಥಾನದ ಆವರಣ ವಿಸ್ತರಣೆಯಾಗಿದ್ದು, ಶ್ರೀ ಸಂಕಷ್ಟಹರ ಗಣಪತಿ, ಶ್ರೀ ಅಮೃತೇಶ್ವರ, ಶ್ರೀ ಸತ್ಯನಾರಾಯಣ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು, ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ಹಾಗೂ ನವಗ್ರಹಗಳನ್ನು ಭಕ್ತಿಯಿಂದ ಆರಾಧಿಸಲಾಗುತ್ತಿದೆ.
ಸುಮಾರು ನಾಲ್ಕು ದಶಕಗಳ ಇತಿಹಾಸ ಹೊಂದಿರುವ ದೇವಸ್ಥಾನದ ಮೂಲ ಕಟ್ಟಡ ಹಾಗೂ ಗೋಪುರವು ವರ್ಷಗಳ ಸವಕಳಿಯಿಂದ ಶಿಥಿಲಗೊಂಡ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ದೇವಸ್ಥಾನದ ವಾರ್ಷಿಕ ಸಾಮಾನ್ಯ ಸಭೆಗಳಲ್ಲಿ ಈ ಕುರಿತು ಚರ್ಚಿಸಿ ಕೈಗೊಂಡ ನಿರ್ಣಯಗಳು ಹಾಗೂ ಧಾರ್ಮಿಕ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.ಸುಮಾರು ₹2 ಕೋಟಿ ವೆಚ್ಚದ ಅಂದಾಜು:ದೇವಸ್ಥಾನದ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ಗುರುಮಂದಿರದ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ₹2 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ ಎಂದು ಸಮಿತಿ ತಿಳಿಸಿದೆ. ಕಾಮಗಾರಿಗಳಿಗೆ ಭಕ್ತರು ತನು-ಮನ-ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ವಸ್ತುರೂಪದಲ್ಲಿ ಅಥವಾ ನಗದು ರೂಪದಲ್ಲಿ ನೀಡುವ ಮೂಲಕವೂ ಭಕ್ತರು ಕೈಜೋಡಿಸಬಹುದು. ದೇವಸ್ಥಾನದ ಅಭಿವೃದ್ಧಿ ಕಾರ್ಯವು ಸಮುದಾಯದ ಹಾಗೂ ಭಕ್ತರ ಸಹಭಾಗಿತ್ವದಿಂದ ಪೂರ್ಣಗೊಳ್ಳಲಿದ್ದು, ಪ್ರತಿಯೊಬ್ಬ ಭಕ್ತರೂ ತಮ್ಮ ಕೈಲಾದ ನೆರವು ನೀಡುವಂತೆ ಸಮಿತಿ ಮನವಿ ಮಾಡಿದೆ.