ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸಿ

KannadaprabhaNewsNetwork |  
Published : Apr 11, 2024, 12:55 AM IST
ಅಅಅಅ | Kannada Prabha

ಸಾರಾಂಶ

ಬರಗಾಲದ ಕಷ್ಟ ಅರಿಯದ ಹಾಗೂ ಬರ ಪರಿಹಾರ ನೀಡದ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬರಗಾಲದ ಕಷ್ಟ ಅರಿಯದ ಹಾಗೂ ಬರ ಪರಿಹಾರ ನೀಡದ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಹಳ್ಳಿಗಳ ಪ್ರವೇಶ ನಿರ್ಬಂಧಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಕರೆ ನೀಡಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ನೀರಿಲ್ಲದೆ ಒಣಗಿರುವ ಕಬ್ಬಿನ ಗಿಡಕ್ಕೆ ತುಂತುರು ನೀರು ಬಿಟ್ಟು ಶೋಕ ಗೀತೆಯೊಂದಿಗೆ ಬರಗಾಲದ ಸಂಕಷ್ಟ ರೈತರ ದಿಕ್ಸೂಚಿ ವಿಭಾಗೀಯ ಮಟ್ಟದ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜಕೀಯ ಮುಖಂಡರಿಗೆ ಅಧಿಕಾರದ ಹುಚ್ಚು, ರೈತರಿಗೆ ಜೀವನದ ಸಂಕಷ್ಟ ರೈತರ ಬದುಕು ರಕ್ಷಿಸುವವರು ಯಾರು? ಇಂದು ರಾಜಕಾರಣ ಕುಟುಂಬ ರಾಜಕೀಯವಾಗಿ ವ್ಯಾಪಕವಾಗಿ ವ್ಯಾಪಾರವಾಗಿದೆ. ಮತ ನೀಡಿದ ಪ್ರಜೆಗಳು ಸಂಕಷ್ಟಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರೂ ಇಲ್ಲವಾಗಿದ್ದಾರೆ. ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ. ರಾಜಕೀಯ ಕ್ಷೇತ್ರ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ. ರಾಜ್ಯದಲ್ಲಿ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗದಂತಾಗಿದೆ. ಅಧಿಕಾರಿಗಳು ಚುನಾವಣೆ ಕಾರಣ ಹೇಳಿ ರೈತರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.

ರಾಜಕೀಯ ಪಕ್ಷದ ಮುಖಂಡರು ಅಧಿಕಾರ ಹಿಡಿಯುವ ಹುಚ್ಚಿನಲ್ಲಿ ತೇಲಾಡುತ್ತಿದ್ದಾರೆ. ಆದರೆ, ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಬರಗಾಲದ ನೀರಿನ ಸಮಸ್ಯೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ಕೊಳವೆ ಬಾವಿಗಳು ಹಿಂಗುತ್ತಿವೆ. ಇದು ರಾಜಕೀಯ ಪಕ್ಷಗಳಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.

ರೈತರು ಎಚ್ಚೆತ್ತುಕೊಂಡು ಹಳ್ಳಿಗಳಲ್ಲಿ ಗುಡಿಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ, ಕಟ್ಟೆ ಹೂಳೆತುವ ಮೂಲಕ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸುವ ಕೆಲಸದಲ್ಲಿ ರೈತರು ಶ್ರದ್ಧೆ ವಹಿಸಿದ್ದರೆ ಮುಂದಿನ ವರ್ಷಗಳಲ್ಲಿ ಕೊಳವೆ ಬಾವಿಗಳು ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ. ಇಂದಿನ ರಾಜಕಾರಣಿಗಳಿಗೆ ಇದೆಲ್ಲ ಕಾಣುವುದಿಲ್ಲ ಮತ್ತು ಅವರಿಗೆ ಬೇಕಾಗಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಮರಳುವಾಡಿನ ಓಯಸ್ಸಿಸ್ ಇದ್ದಂತೆ ಎಂಬುವುದನ್ನು ಅರಿತುಕೊಳ್ಳಬೇಕು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ. ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು 5.80 ಕೋಟಿ ಟನ್‌ ಕಬ್ಬು ನುರಿಸಿ ಸಕ್ಕರೆ ಕಾರ್ಖಾನೆಗಳು ಸುಮಾರು ₹2,600 ಕೋಟಿ ಕಬ್ಬಿನ ಹಣವನ್ನು ರೈತರಿಗೆ ಪಾವತಿಸಿಲ್ಲ. ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರು ಕೂಡಲೇ ಕಾನೂನು ಕ್ರಮ ಕೈಗೊಂಡು ಶೇ.15 ಬಡ್ಡಿ ಸೇರಿಸಿ ಹಣ ಕೂಡಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊಳವೆ ಬಾವಿಗಳಲ್ಲಿ ನೀರು ಹಿಂಗಿ ಹೋಗಿದೆ ಕಬ್ಬಿನ ಬೆಳೆ ಒಣಗುತ್ತಿದೆ. ಇಂಥಹ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲಿನರಾಗಿದ್ದಾರೆ. ರೈತರ ಸಂಕಷ್ಟ ಅರಿತುಕೊಳ್ಳಲಿ ಎಂದು ಅಧಿಕಾರಿಗಳನ್ನು ಎಚ್ಚರಿಸಲು ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯ ಮೇಲೆ ಗೋಲಿಬಾರ್ ಮಾಡುತ್ತದೆ. ರೈತರನ್ನು ಕೊಲ್ಲುತ್ತದೆ. ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ಹಾಗೂ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ ಹುಷಿಗೂಳಿಸಿದೆ ಎಂದು ಕಿಡಿಕಾರಿದರು.

ಇದೇ ಸಮಯದಲ್ಲಿ ದೆಹಲಿ ಗಡಿ ರೈತ ಹೋರಾಟದಲ್ಲಿ ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ಯುವ ರೈತ ಶುಭಕರನ್ ಸಿಂಗ್ ಅಸ್ತಿ ಕಳಸಕೆ ಶ್ರದ್ಧಾಂಜಲಿ ಗೌರವ ಸಲ್ಲಿಸಲಾಯಿತು.

ರಾಜ್ಯ ರೈತ ಸಂಘದ ಬಲ್ಲೂರ್ ರವಿಕುಮಾರ, ಬೆಳಗಾವಿ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ. ಎಸ್.ಬಿ.ಸಿದ್ನಾಳ್, ಧಾರವಾಡ ಜಿಲ್ಲೆಯ ಮಹೇಶ್ ಬೆಳಗಾವ್ಕರ, ಪರಶುರಾಮ ಎತ್ತಿನಗುಡ್ಡ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ್ ಭೂಬಾಟಿ, ಶಂಕರ್ ಕಾಜಗಾರ, ಬಾಗಲಕೋಟೆ ಅಧ್ಯಕ್ಷ ಹಣಮಂತ ಮುಗದುಮ್, ಕಲ್ಲಪ್ಪ ಬಿರಾದಾರ, ಹತ್ತಹಳ್ಳಿ ದೇವರಾಜ್, ನಿಜಗುಣ ಕೆಲಗೇರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯಉಪಾಧ್ಯಕ್ಷ ಸುರೇಶ ಪಾಟೀಲ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮಠ ಸ್ವಾಗತಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬರದ ಸಂಕಷ್ಟ ಕಾಲದಲ್ಲಿ ಜಗಳವಾಡುತ್ತ ಮನರಂಜನೆ ನಿಡುತ್ತಿದ್ದಾರೆ. ಇದು ರೈತರ ಹೊಟ್ಟೆ ತುಂಬುವುದಿಲ್ಲ ಈ ನಾಟಕ ಬಿಡಿ, ಪರಿಹಾರ ನೀಡಿ. ಇಲ್ಲವೇ ಮತ ಕೇಳಲು ಬರಬೇಡಿ. ಅಭ್ಯರ್ಥಿಗಳನ್ನು ಊರಿಂದ ಹೊರಗಿಡಿ.

-ಕುರುಬೂರು ಶಾಂತಕುಮಾರ,

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರು.

--------------------

ಬಂಡವಾಳ ಶಾಹಿಗಳ ₹14 ಲಕ್ಷ ಕೋಟಿ ಸಾಲಮನ್ನಾ ಮಾಡಿ ಸಂಕಷ್ಟದಲ್ಲಿರುವ ದೇಶದ ರೈತರ ಸಾಲಮನ್ನಾ ಮಾಡದೇ ನಿರ್ಲಕ್ಷತನ ತೋರುತ್ತಿದೆ. ಪ್ರವಾಹ ಹಾನಿ ಅತಿವೃಷ್ಟಿ, ಮಳೆಹಾನಿ, ಬರಗಾಲ ನಷ್ಟ ಪರಿಹಾರದ ಬಗ್ಗೆ ಯಾವುದೇ ಗಂಭೀರ ಗಮನ ಹರಿಸುತ್ತಿಲ್ಲ. ಈ ರೀತಿಯಲ್ಲಿ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ.

-ಚೂನಪ್ಪ ಪೂಜಾರಿ, ರಾಜ್ಯ ರೈತ ಸಂಘದ ಅಧ್ಯಕ್ಷರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ