ಧಾರವಾಡ: ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ಈ ಎಲ್ಲ ವಿಚಾರಗಳ ಬಗ್ಗೆ ಏನನ್ನೂ ಮಾತನಾಡಬಾರದು ಎಂದು ಹೈಕಮಾಂಡ್ ನಮಗೆ ನಿರ್ಬಂಧ ಹಾಕಿದೆ. ಸಂಪುಟ ವಿಸ್ತರಣೆ ಮಾಡಲು ಸಿಎಂಗೆ ಪರಮಾಧಿಕಾರವಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವುದು ಮತ್ತು ಬದಲಾವಣೆ ಮಾಡುವುದು ಸಿಎಂ ಅವರ ಹಕ್ಕು. ಅದು ಅವರ ವಿವೇಚನೆಗೆ ಬಿಟ್ಟದ್ದು. ಹೈಕಮಾಂಡ್ ಜತೆ ಚರ್ಚೆ ಮಾಡಿ ವಿಸ್ತರಣೆ ಮಾಡುವ ಪದ್ಧತಿ ಇದೆ ಎಂದರು.ಹಳೆಯ ಸಚಿವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡುವ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಸಿಎಂ ಅವರನ್ನೇ ಪ್ರಶ್ನೆ ಕೇಳಬೇಕಿತ್ತು. ಅದಕ್ಕೆ ನಾನು ಉತ್ತರ ಕೊಡುವುದು ಸರಿಯಲ್ಲ ಎಂದರು.
ಸಿಎಂ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕೂಡ ಸಿಎಂಗೆ ಗೊತ್ತು. ನಾವು ಮಾತನಾಡುವುದಕ್ಕೆ ಕೂಡ ನಮ್ಮ ಪಕ್ಷ ನಿರ್ಬಂಧ ಹಾಕಿದೆ ಎಂದರುಅಭಿವೃದ್ಧಿ ಮಾಡುವ ವಿಚಾರ ಬಂದಾಗ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಅಭಿವೃದ್ಧಿ ಬಗ್ಗೆ ಬಿಜೆಪಿಗೆನೇ ಆಸಕ್ತಿ ಇಲ್ಲ. ಅದರ ಬದಲಾಗಿ ಕೇವಲ ಆರೋಪ ಮಾಡುವುದು, ಹಿಟ್ ಆ್ಯಂಡ್ ರನ್ ಮಾಡುವುದು. ಯಾವುದಾದರೂ ಸಣ್ಣ ವಿಷಯ ತೆಗೆದುಕೊಂಡು ಅದನ್ನೇ ಹೇಳುತ್ತ ಹೋಗುವುದು ಮಾಡುತ್ತಿದೆ. ಇದು ಸಾರ್ವಜನಿಕರಿಗೆ ಮತ್ತು ರಾಜ್ಯಕ್ಕೆ ಒಳ್ಳೆಯದಲ್ಲ. ಅಭಿವೃದ್ಧಿ ಬಗ್ಗೆ ಮಾತಾಡಬೇಕು, ನಮ್ಮ ತಪ್ಪು ತೋರಿಸಬೇಕು, ಎಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವುದರ ಬಗ್ಗೆ ಟೀಕೆ ಮಾಡಬೇಕು.
ಬಿಜೆಪಿಯವರು ಇದನ್ನು ಸದನದ ಒಳಗೂ ಮಾಡುವುದಿಲ್ಲ, ಹೊರಗೂ ಮಾಡುವುದಿಲ್ಲ. ರಚನಾತ್ಮಕ ವಿರೋಧ ಪಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಕರ್ತವ್ಯ ನಿಭಾಯಿಸಿಲ್ಲ ಎಂದರು.