ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಾಣಿಕೆಗೆ ತಡೆ

KannadaprabhaNewsNetwork | Published : Dec 20, 2024 12:47 AM

ಸಾರಾಂಶ

ಕರ್ನಾಟಕದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆಯನ್ನು ನಿರ್ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆಯನ್ನು ಗುರುವಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರುಕರ್ನಾಟಕದಿಂದ ತೆಲಂಗಾಣ ರಾಜ್ಯಕ್ಕೆ ಭತ್ತ ಸಾಗಾಣಿಕೆಯನ್ನು ನಿರ್ಬಂಧಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆಯನ್ನು ಗುರುವಾರ ನಡೆಸಲಾಯಿತು.ತಾಲೂಕಿನ ದೇವಸುಗೂರು ಸಮೀಪದ ಕೃಷ್ಣ ನದಿಯ ಸೇತುವೆ ಮೇಲೆ ರಸ್ತೆ ಸಂಚಾರ ತಡೆದು ತೆಲಂಗಾಣ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತೆಲಂಗಾಣ ರಾಜ್ಯದಲ್ಲಿ ರೈತರು ಬೆಳೆದ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2500 ರು.ಗಳು ಹಾಗೂ 500 ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಭತ್ತಕ್ಕೆ 2,100 ರು.ಗಳಿಗಿಂತಲೂ ಕಡಿಮೆ ದರ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಕಡೆಗೆ ಭತ್ತವನ್ನು ಸಾಗಿಸು ತ್ತಿದ್ದಾರೆ. ಆದರೆ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಿಂದ ಭತ್ತದ ವ್ಯಾಪಾರಿಗಳು ತೆಲಂಗಾಣ ರಾಜ್ಯಕ್ಕೆ ಹೋಗುವಾಗ ಶಕ್ತಿನಗರ ಚೆಕ್‌ಪೋಸ್ಟ್‌ನಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಜಲಾಲ್‌ಪೂರ ಚೆಕ್ ಪೋಸ್ಟ್‌ಲ್ಲಿ ಭತ್ತ ಲಾರಿಗಳನ್ನು ತಡೆದು ರೈತರಿಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.ಕಳೆದ ಎರಡು ದಿನಗಳ ಹಿಂದೆ ಸುಮಾರು 5 ರಿಂದ 6 ಲಾರಿಗಳನ್ನು ಕೃಷ್ಣ ಠಾಣೆಯ ಪೊಲೀಸರು ಠಾಣೆಯಲ್ಲಿ ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ಭತ್ತದ ಸಾಗಾಣಿಕೆಗೆ ಸಮಸ್ಯೆಯಾಗಿದೆ. ಪ್ರತಿದಿನ ತೆಲಂಗಾಣ ರಾಜ್ಯದಿಂದ ರಾಯಚೂರು ಮಾರುಕಟ್ಟೆಗೆ 30 ರಿಂದ 40 ಸಾವಿರ ಭತ್ತವೂ ಯಾವುದೇ ನಿರ್ಬಂಧವಿಲ್ಲ ಆವಕವಾಗುತ್ತಿವೆ. ಇದರಿಂದ ಸ್ಥಳೀಯ ಮಾರುಕಟ್ಟೆಯ ಭತ್ತದ ದರ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತಿದೆ ಎಂದು ಸಮಸ್ಯೆಯನ್ನು ಹೊರಹಾಕಿದರು.ಈ ಕೂಡಲೇ ತೆಲಂಗಾಣಕ್ಕೆ ರಾಜ್ಯದಿಂದ ಭತ್ತ ಸಾಗಾಣಿಕೆಗೆ ವಿಧಿಸಿದ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಗೌರಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ತಿನಪೇಟೆ, ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯಕ್ಷ ನಾಗರತ್ನಮ್ಮ, ರಾಜ್ಯ ಕಾರ್ಯದರ್ಶಿ ಸುಗೂರಯ್ಯಸ್ವಾಮಿ, ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ್, ಪದಾಧಿಕಾರಿಗಳಾದ ಲಿಂಗಾರೆಡ್ಡಿ, ದೇವರಾಜ ನಾಯಕ, ಮಲ್ಲಣ್ಣ ದಿನ್ನಿ, ಯಾದಗಿರಿ ಜಿಲ್ಲಾಧ್ಯಕ್ಷ ಶರಣು ಮಂದರವಾಡ, ಮಲ್ಲಿಕಾರ್ಜುನರಾವ್, ವ್ಯಾಪಾರಿ ವೆಂಕಟೇಶ ಸೇರಿ ಮುಖಂಡರು, ರೈತರು ಇದ್ದರು.

ತೆಲಂಗಾಣ ಪೊಲೀಸರೊಂದಿಗೆ ವಾಗ್ವಾದಪ್ರತಿಭಟನೆ ಸಮಯದಲ್ಲಿ ತೆಲಂಗಾಣದಿಂದ ರಾಯಚೂರು ಜಿಲ್ಲೆಗೆ ಆಗಮಿಸುತ್ತಿರುವ ಲಾರಿಗಳನ್ನು ರೈತ ಸಂಘದವರು ತಡೆದರು. ಈ ಸಮಯದಲ್ಲಿ ತೆಲಂಗಾಣ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಮತ್ತು ರೈತ ಮುಖಂಡರ ಮಧ್ಯೆ ಮಾತಿನ ಚಕಮಕಿ ಸಹ ನಡೆಯಿತು. ತೆಲಂಗಾಣದಿಂದ ಜಿಲ್ಲೆಗೆ ಪ್ರವೇಶಿಸುತ್ತಿರುವ ಲಾರಿಗಳನ್ನು ನಿಲ್ಲಿಸಿದ್ದರಿಂದ ಎನ್‌.ಎಚ್‌.ನಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಯಾವುದೇ ರೀತಿಯ ನಿರ್ಬಂಧನೆ ವಿಧಿಸಿಲ್ಲ. ಆದರೆ ಭತ್ತದ ವಿಚಾರವಾಗಿ ಉಂಟಾಗಿರುವ ಸಮಸ್ಯೆ ಕುರಿತು ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತೆಲಂಗಾಣ ರಾಜ್ಯದ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಅವರ ಸಹ ಯಾವುದೇ ನಿರ್ಬಂಧವನ್ನೂ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- ರಾಜೇಶ್ವರಿ, ಎಪಿಎಂಸಿ ಹೆಚ್ಚುವರಿ ನಿರ್ದೇಶಕಿ, ----ಡಿಸಿ ಸೂಚನೆ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಕರ್ನಾಟಕ ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಾಣಿಕೆ ಮಾಡಲು ನಿರ್ಬಂಧನೆ ವಿಧಿಸಿಲ್ಲ. ರೈತರು ಭತ್ತವನ್ನು ತೆಗೆದುಕೊಂಡು ಹೋಗಬಹುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಪ್ರತಿಭಟನೆಕಾರರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದಿಂದ ಕೈಗೊಂಡಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳಧಾಳ ತಿಳಿಸಿದರು.---19ಕೆಪಿಆರ್‌ಸಿಆರ್ 03: ರಾಯಚೂರು ತಾಲ್ಲೂಕಿನ ದೇವಸುಗೂರು ಸಮೀಪದ ಕೃಷ್ಣಾನದಿ ಸೇತುವೆಯ ರಾಷ್ಟ್ರೀಯ ಹೆದ್ದಾರಿ ಮೇಲೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಸಂಚಾರ ತಡೆದು ಪ್ರತಿಭಟಿಸಿದರು.

Share this article