ಕಾಂಗ್ರೆಸ್ ಕಚೇರಿಗೆ ಬಿಜೆಪಿ, ಸಿ.ಟಿ.ರವಿ ಮನೆಗೆ ಕಾಂಗ್ರೆಸ್ ಮುತ್ತಿಗೆ ಯತ್ನ । ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರೆ, ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ಗುರುವಾರ ನಡೆಯಿತು.
ಕಾಂಗ್ರೆಸ್, ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಿ ಸುಳ್ಳು ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಈ ಕುತಂತ್ರದ ರೂವಾರಿ ಯಾಗಿದ್ದಾರೆ. ಉದ್ದೇಶಪೂರ್ವಕವಾಗಿ ಅಮಿತ್ ಷಾ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಾಲ್ಕು ತಂಡಗಳಾಗಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಾಂಗ್ರೆಸ್ ಕಚೇರಿಗೆ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಅಲ್ಲದೆ ಒಂದು ತಂಡವನ್ನು ಕಾಂಗ್ರೆಸ್ ಕಚೇರಿ ಎದುರು ಪೊಲೀಸರು ವಶಕ್ಕೆ ಪಡೆದರೆ, ಕೆಲವರನ್ನು ಕಾಂಗ್ರೆಸ್ ಕಚೇರಿಯಿಂದ ನೂರು ಮೀಟರ್ ದೂರದಲ್ಲೇ ಹಾಗೂ ಇನ್ನುಳಿದವರನ್ನು ಬಿಜೆಪಿ ಕಚೇರಿ ಸಮೀಪವೇ ವಶಕ್ಕೆ ಪಡೆದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಭಾವಚಿತ್ರವನ್ನು ಹಿಡಿದು ರಾಹುಲ್ ಕಳ್ಳ ಎಂದು ಘೋಷಣೆ ಕೂಗಿದರು. ಈ ನಡುವೆ ಮಹಿಳಾ ಬಿಜೆಪಿ ಕಾರ್ಯಕರ್ತರು ದಿಢೀರನೆ ಕಾಂಗ್ರೆಸ್ ಕಚೇರಿಯತ್ತ ಧಾವಿಸಿದ ಕೂಡಲೇ ಪೊಲೀಸರು ಮಹಿಳಾ ಕಾರ್ಯಕರ್ತರನ್ನು ರಸ್ತೆ ಮಧ್ಯೆಯೇ ತಡೆದು ವಶಕ್ಕೆ ಪಡೆದರು.
ಮಹಿಳಾ ಸಚಿವರ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿರುವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸುವುದು ಮಾತ್ರವಲ್ಲದೆ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸಿ.ಟಿ.ರವಿ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ವರ್ತನೆ ತೋರಿದಲ್ಲಿ ಮಹಿಳೆಯರೇ ಸಿ.ಟಿ.ರವಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ನಾಯಕರು ಸಿ.ಟಿ.ರವಿ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ಬಿಜೆಪಿ ಸಂಸ್ಕಾರ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
19 ಕೆಸಿಕೆಎಂ 5ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.