ಹುಣ್ಣಿಮೆ ದಿನ ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ!

KannadaprabhaNewsNetwork |  
Published : Oct 27, 2026, 02:15 AM IST
ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿರುವ ಮಾತಂಗಿ ದೇವಿ. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿರುವ ಮಾದಿಗ ಸಮುದಾಯದ ಮನೆದೇವಿ ಮಾತಂಗಿ ದೇವಿಯ ದರ್ಶನಕ್ಕೆ ಹುಣ್ಣಿಮೆ ದಿನ ಅವಕಾಶ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿರುವ ಮಾದಿಗ ಸಮುದಾಯದ ಮನೆದೇವಿ ಮಾತಂಗಿ ದೇವಿಯ ದರ್ಶನಕ್ಕೆ ಹುಣ್ಣಿಮೆ ದಿನ ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

ಹುಲಿಗೆಮ್ಮ ದೇವಸ್ಥಾನ ಸಮಿತಿಯು ಹಲವು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ಇದೀಗ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವೂ ಮುಂದುವರಿಸಿದೆ. ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಮಾತಂಗಿ ದೇವಿಯ ಅರ್ಚಕ ಸಂಘರ್ಷ ಪೂಜಾರಿ ಅವರೇ ದರ್ಶನಕ್ಕೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿದ್ದಾರೆ.

ಯಾಕೆ ಈ ವಿವಾದ?: ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಹುಣ್ಣಿಮೆಯ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ದೇವಸ್ಥಾನದ ಆವರಣದಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಹುಲಿಗೆಮ್ಮ ದೇವಿಯ ಎದುರಿನಲ್ಲಿರುವ ಮಾತಂಗಿ ದೇವಿ ದೇವಸ್ಥಾನಕ್ಕೆ ಹುಣ್ಣಿಮೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮಾದಿಗ ಸಮುದಾಯದವರು ತಮ್ಮ ಮನೆದೇವಿ ಮಾತಂಗಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಆಗಮಿಸುತ್ತಾರೆ. ಆದರೆ, ಹುಣ್ಣಿಮೆ ದಿನ ಮಾತಂಗಿ ದೇವಿಯ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಹುಲಿಗೆಮ್ಮ ದೇವಿಯ ದರ್ಶನದ ಜತೆಗೆ ಮಾತಂಗಿ ದೇವಿಯ ದರ್ಶನಕ್ಕೂ ಅವಕಾಶ ಕಲ್ಪಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ಮಾತಂಗಿ ದೇವಿ ಮಾದಿಗ ಸಮುದಾಯದ ಮನೆದೇವಿಯಾಗಿದ್ದಾಳೆ. ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಬೇರೆ ರಾಜ್ಯಗಳಿಂದಲೂ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಆದರೆ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಮಾತಂಗಿ ದೇವಿಯ ದರ್ಶನಕ್ಕೆ ಅವಕಾಶವಿಲ್ಲದಂತಾಗಿದೆ ಎಂದು ಮಾತಂಗಿ ದೇವಿ ಅರ್ಚಕ ಸಂಘರ್ಷ ಪೂಜಾರಿ ಹೇಳುತ್ತಾರೆ.

ಉದ್ದೇಶಪೂರ್ವಕವಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಹುಲಿಗೆಮ್ಮ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ದೇವಸ್ಥಾನದ ಆವರಣದಲ್ಲಿ ಜನಸಂದಣಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹುಣ್ಣಿಮೆ ದಿನ ಸರದಿಯಲ್ಲಿ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ವ್ಯವಸ್ಥೆ ಹತ್ತಾರು ವರ್ಷಗಳಿಂದ ಜಾರಿಯಲ್ಲಿದೆ. ಉಳಿದ ದಿನಗಳಲ್ಲಿ ಮಾತಂಗಿ ದೇವಿಯ ದರ್ಶನಕ್ಕೆ ಅವಕಾಶವಿದೆ ಎಂದು ಶ್ರೀ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಎಂ.ಎಚ್. ಪ್ರಕಾಶ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಕುಲಕ್ಕೆ ರಾಮಾಯಣ ಗ್ರಂಥ ಕೊಡುಗೆ ನೀಡಿದ ಆದಿಕವಿ: ಮಹಾಂತಗೌಡ
ಸೀಗೆ ಹುಣ್ಣಿಮೆ: ಹುಲಿಗೆಮ್ಮನ ದರ್ಶನ ಪಡೆದ 3 ಲಕ್ಷಕ್ಕೂ ಅಧಿಕ ಭಕ್ತರು