ಯಲಬುರ್ಗಾ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ತಾಲೂಕಾಡಳಿತ, ಪಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ನಾಯಕ ಸಮಾಜದಿಂದ ವಾಲ್ಮೀಕಿ ಜಯಂತಿ ನಿಮಿತ್ತ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಲಬುರ್ಗಾ: ಮನುಕುಲಕ್ಕೆ ರಾಮಾಯಣ ಮಹಾಕಾವ್ಯ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಹೇಳಿದರು.

ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ತಾಲೂಕಾಡಳಿತ, ಪಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ನಾಯಕ ಸಮಾಜದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ನಿಮಿತ್ತ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಮಹರ್ಷಿ ಅವರು ರಾಮಾಯಣ ಕಾವ್ಯ ರಚಿಸುವ ಮೂಲಕ ರಾಮನನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಶ್ಲೋಕಗಳು ಮನುಕುಲದ ಏಳಿಗೆಗೆ ಸಹಕಾರಿಯಾಗಿದೆ. ಇಂಥ ತತ್ವನೀತಿ ಪಾಲನೆಗೆ ಮುಂದಾಗಬೇಕಿದೆ ಎಂದರು.

ಪಪಂ ಮುಖ್ಯಾಧಿಕಾರಿ ನಾಗೇಶ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ ಮಾತನಾಡಿ, ರಾಮಾಯಣ ಮಹಾಕಾವ್ಯದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ಕವಿ ಮಹರ್ಷಿ ವಾಲ್ಮೀಕಿ ಶ್ರಮಿಸಿದ್ದಾರೆ ಎಂದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಯಲ್ಲಪ್ಪ ನಾಯಕ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಒಂದು ಜಾತಿ, ಸಮಾಜಕ್ಕೆ ಸೀಮಿತವಾಗದೇ ಮನುಕುಲಕ್ಕೆ ಅವರ ಕೊಡುಗೆ ದೊಡ್ಡದಿದೆ ಎಂದರು‌.

ಬೇಡಿಕೆ ಸಲ್ಲಿಕೆ: ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾದಿಂದ ಮನವಿ ಸಲ್ಲಿಸಲಾಯಿತು. ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಆಧಾರದ ಮೇಲೆಗೆ ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ, ರಾಜ್ಯದಲ್ಲಿ ಬುಡಕಟ್ಟು ವಿಶ್ವ ವಿದ್ಯಾಲಯದ ಸ್ಥಾಪನೆ, ಪರಿಶಿಷ್ಟ ಪಂಗಡದಲ್ಲಿ ಇತರ ಜಾತಿ ಸೇರ್ಪಡೆ ಮಾಡಬಾರದು, ಅಲ್ಲದೇ ಸಮಾಜದ ಹೆಸರು ಕೆಲವರು ಎಸ್‌ಟಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಅಂತಹರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜದ ವಿವಿಧ ಬೇಡಿಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ಪಿಎಸ್ಐ ವಿಜಯ ಪ್ರತಾಪ್, ಅಧಿಕಾರಿಗಳಾದ ಬಿ. ಮಲ್ಲಿಕಾರ್ಜುನ, ಟಿ.ಜೆ. ದಾನಿ, ಲಲಿತಾ ನಾಯ್ಕರ, ಮಾಧವಿ ವೈದ್ಯ, ಮುಖಂಡರಾದ ಶ್ರೀಕಾಂತಗೌಡ ಮಾಲಿಪಾಟೀಲ, ಹಂಚ್ಯಾಳಪ್ಪ ತಳವಾರ್, ಭೀಮಣ್ಣ ಹವಳಿ, ಅಶೋಕ ಮಾಲಿಪಾಟೀಲ್, ಈರಪ್ಪ ಕರೆಕುರಿ, ಕಳಕಪ್ಪ ತಳವಾರ್, ಶಂಕ್ರಗೌಡ ಪಾಟೀಲ್, ಸುಮಾ ಕಂಚಿ ಉಪಸ್ಥಿತರಿದ್ದರು.