ಪುನರ್ಧನ ಸೌಲಭ್ಯ ನಿಧಿ ಕಡಿತ: ಹಿಂದಿನ ಶಕ್ತಿ ಬಹಿರಂಗ

KannadaprabhaNewsNetwork |  
Published : Oct 11, 2024, 11:51 PM IST
ಪೋಟೋ: 10ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಮಾತನಾಡಿದರು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಪುನರ್ಧನ ಸೌಲಭ್ಯ ನಿಧಿ ಕಡಿತಗೊಳಿಸಿದ ವಿಚಾರವಾಗಿ ನಬಾರ್ಡ್ ಬ್ಯಾಂಕಿನ ನಿಲುವನ್ನು ಸಮರ್ಥಿಸಿಕೊಂಡ ಸಹಕಾರಿ ಭಾರತಿ ನಿಲುವು ರೈತ ವಿರೋಧಿಯಾಗಿದ್ದು, ನಬಾರ್ಡ್‌ಗೂ ಸಹಕಾರಿ ಭಾರತಿಗೆ ಏನು ಸಂಬಂಧ ಎಂದು ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಪ್ರಶ್ನಿಸಿದೆ.

ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕ್‌ಗಳಿಗೆ ಬರಬೇಕಿದ್ದ ಪುನರ್ಧನ ಸೌಲಭ್ಯ ನಿಧಿ ಕಡಿತವಾಗಿರುವುದರ ಹಿಂದಿನ ಶಕ್ತಿಗಳು ಯಾರು ಎನ್ನುವುದು ಬಹಿರಂಗವಾಗಿದೆ. ನಬಾರ್ಡ್ ಪರವಾಗಿ ಮಾತನಾಡಿರುವ ಸಹಕಾರಿ ಭಾರತಿ ಮುಖಂಡರ ನಡೆ ನಿಜಕ್ಕೂ ಬೇಸರ ತರಿಸಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿಗೆ ಡಿಸಿಸಿ ಬ್ಯಾಂಕ್‌ನಿಂದ 750 ಕೋಟಿ ರು.ಗಳಿಗೆ ಪುನರ್ಧನ ಸೌಲಭ್ಯಕ್ಕಾಗಿ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅಲ್ಲಿಂದ ಕೇವಲ 113 ಕೋಟಿ ರು.ಮಾತ್ರ ಮಂಜೂರು ಮಾಡಲಾಗಿದೆ. ಕೇವಲ ಶೇ.10ರಷ್ಟು ಮಾತ್ರ ಪುನಧರ್ನ ಸೌಲಭ್ಯ ಸಿಕ್ಕಿದೆ. ಈ ಪ್ರಮಾಣದಲ್ಲಿ ಪುನರ್ಧನ ನಿಧಿ ಕಡಿತವಾಗಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದು ಎಂಬ ಅನುಮಾನ ಇತ್ತು.

ಗುರುವಾರ ಸಹಕಾರಿ ಭಾರತಿಯವರು ಪತ್ರಿಕಾಗೋಷ್ಠಿ ನಡೆಸಿ ನಬಾರ್ಡ್ ನಿಲುವು ಪ್ರಕಟಿಸುವ ಮೂಲಕ ನಮ್ಮ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಆ ಮೂಲಕ ಇವರು ರೈತರ ವಿರೋಧಿಗಳು ಎನ್ನುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

ಡಿಸಿಸಿ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್ ಆರ್ಥಿಕ ಸ್ವಾವಲಂಬನೆಯಾಗಬೇಕು ಯಾರನ್ನು ಅವಲಂಬಿಸಬಾರದು ಎಂದು ಸಹಕಾರಿ ಭಾರತಿ ಮುಖಂಡರು ಹೇಳಿಕೆ ನೀಡಿದ್ದಾರೆ. ಅವರಿಗೆ ವಾಸ್ತವ ಗೊತ್ತಿಲ್ಲ, ಡಿಸಿಸಿ ಬ್ಯಾಂಕ್ ರೈತರಿಗೆ ಎಷ್ಟು ಪ್ರಮಾಣದ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ, ಸಹಕಾರಿ ಭಾರತಿ ಅಡಿಯಿರುವ ಮ್ಯಾಮ್ಕೋಸ್ ಸೇರಿ ಇತರೆ ಸಹಕಾರಿ ಸಂಸ್ಥೆಗಳು ಎಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತವೆ ಎನ್ನುವುದನ್ನು ಅಂಕಿ ಅಂಶಗಳಲ್ಲಿ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಸಹಕಾರಿ ಭಾರತಿಯವರಿಗೆ ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿದ್ದರೆ ಜಿಲ್ಲೆಯ ಯಾವುದಾದರೂ ಎರಡು ತಾಲೂಕುಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಿ, ರೈತರಿಗೆ ಬಡ್ಡಿರಹಿತ ಸಾಲ ನೀಡಲಿ ಎಂದು ತಿರುಗೇಟು ನೀಡಿದ ಅವರು, ರೈತರು ಬೆಳೆ ಬೆಳೆಯಲು ಬಡ್ಡಿ ರಹಿತ ಸಾಲವನ್ನು ಡಿಸಿಸಿ ಬ್ಯಾಂಕ್ ನೀಡಿದರೆ, ರೈತರು ಬೆಳೆದ ಅಡಿಕೆ ಬೆಳೆಯನ್ನು ಅಡವಿಟ್ಟುಕೊಂಡು ಶೇ.11ರ ಬಡ್ಡಿ ದರದಲ್ಲಿ ಮ್ಯಾಮ್‌ಕೋಸ್ ಮತ್ತು ಇತರ ಸಹಕಾರಿ ಬ್ಯಾಂಕ್‌ಗಳು ಸಾಲ ನೀಡಿ ಲಾಭ ಮಾಡುತ್ತಿವೆ ಎಂದರು.

ಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಷಡಾಕ್ಷರಿ ಮಾತನಾಡಿ, ಮೊದಲು ನಬಾರ್ಡ್ ಶೇ.90ರಷ್ಟು ಪುನರ್ಧನ ನೀಡುತ್ತಿತ್ತು. ಈಗ ಕೆಲವರ ಷಡ್ಯಂತ್ರದಿಂದ ಶೇ.10ರಷ್ಟು ನೀಡುತ್ತಿದ್ದಾರೆ. ಕ್ರಮೇಣ ಅದನ್ನು ನಿಲ್ಲಿಸುತ್ತಾರೆ. ನಾವು ಕೂಡ ಎಲ್ಲ ಸಹಕಾರಿ ಬ್ಯಾಂಕ್‌ಗಳಿಗೆ ಸ್ವಯತ್ತರಾಗಬೇಕು. ಮ್ಯಾಮ್‌ಕೋಸ್ ನೆಲಕಚ್ಚಿದಾಗ ಡಿಸಿಸಿ ಬ್ಯಾಂಕ್ ಸಾಲ ನೀಡಿ ಸಹಕರಿಸಿತ್ತು ಎಂಬುವುದನ್ನು ಮರೆತಿದ್ದಾರೆ ಎಂದು ತಿರುಗೇಟು ನೀಡಿದರು.

ಈ ವೇಳೆ ಶಿಮುಲ್ ಅಧ್ಯಕ್ಷ ವಿದ್ಯಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದುಗ್ಗಪ್ಪ ಗೌಡ, ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಜೀವ್, ನಿರ್ದೇಶಕ ಈಶ್ವರಪ್ಪ, ಹಾಪ್ ಕಾಮ್ಸ್ ಉಪಾಧ್ಯಕ್ಷ ನಾಗೇಶ್ ನಾಯ್ಕ್ ಇದ್ದರು.

ಆಧಾರ ರಹಿತ ಹೇಳಿಕೆ: ಆರ್‌ಎಂಎಂ ಕ್ಷಮೆಗೆ ಆಗ್ರಹ

ಡಿಸೆಂಬರ್‌ನಲ್ಲಿ ನಡೆಯಲಿರುವ ಸುಮಾರು 170ಕ್ಕೂ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯನ್ನು ಸಂಘಟಿಸುವ ದೃಷ್ಟಿಯನ್ನಿಟ್ಟುಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೊಸ ಮತ್ತು ಹೆಚ್ಚುವರಿ ಸಾಲವಾಗಿ 1 ಕೋಟಿಗೂ ಹೆಚ್ಚು ಮೊಬಲಗನ್ನು ಒದಗಿಸುವುದಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಭರವಸೆ ನೀಡಿದ್ದಾರೆ ಎಂಬ ಸಹಕಾರಿ ಭಾರತಿ ನಾಯಕರ ಹೇಳಿಕೆ ಆಧಾರ ರಹಿತ ಎಂದು ವಾಟಗೋಡು ಸುರೇಶ್ ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡರು ಕೊಟ್ಟ ಮಾತಿನಂತೆ ನಡೆಯುವವರು. ಅವರ ಇಷ್ಟು ವರ್ಷದ ಸಹಕಾರಿ ಸೇವೆಯಲ್ಲಿ ಎಂದಿಗೂ ಕೊಟ್ಟ ಮಾತು ಮೀರಿದವರಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಅವರು ಈಗಲೂ ಬದ್ಧರಾಗಿದ್ದಾರೆ. ಈಗಾಗಲೇ ಆ ಪ್ರಕ್ರಿಯೆಯೂ ಕೂಡ ಶುರುವಾಗಿದೆ. ಈ ವಿಷಯದಲ್ಲಿ ಸಹಕಾರಿ ಭಾರತಿಯ ಮಹೇಶ್ ಹುಲ್ಕಳಿ ಮತ್ತು ಪ್ರಸನ್ನಕುಮಾರ್ ಅವರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಅವರು ತಕ್ಷಣವೇ ಆರ್.ಎಂ.ಮಂಜುನಾಥ ಗೌಡರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಪೋಟೋ: 10ಎಸ್‌ಎಂಜಿಕೆಪಿ01

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ವಾಟಗೋಡು ಸುರೇಶ್‌ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ