ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತ ಎಣಿಕೆ ಸಿದ್ಧತೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 20 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಎರಡು ಇವಿಎಂ ಯಂತ್ರಗಳಿವೆ. ಹಾಗಾಗಿ ಫಲಿತಾಂಶ ಪ್ರಕಟವಾಗಲು ತುಸು ತಡವಾಗಲಿದೆ. ಅಂಚೆ ಮತ ಪತ್ರಗಳ ಎಣಿಕೆ ನಂತರವೇ ಇವಿಎಂ ಯಂತ್ರಗಳ ಕೈಗೆತ್ತಿ ಕೊಳ್ಳಲಾಗುವುದು ಎಂದರು.
ಇದೇ ಮೊದಲ ಬಾರಿಗೆ ಮತಯಂತ್ರಗಳ ದಾಸ್ತಾನು ಮಾಡಿರುವ ಕಟ್ಟಡದ ಮೇಲುಸ್ತುವಾರಿಗಾಗಿ ಓರ್ವ ಪತ್ರಾಂಕಿತ ಹುದ್ದೆಯ ಅಧಿಕಾರಿಯನ್ನು ದಿನದ 24 ಗಂಟೆಯ ಅವಧಿಗೆ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿತ್ಯವೂ ತಾವು ಖುದ್ದಾಗಿ ಭೇಟಿ ನೀಡಿ ಭದ್ರತಾ ಕೊಠಡಿಗಳನ್ನು ಪರಿಶೀಲಿಸಲಾಗುತ್ತಿದೆ. ಉಮೇದುವಾರ ರಲ್ಲದೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಕೂಡ ಭದ್ರತಾ ಕೊಠಡಿಯನ್ನು ಭೇಟಿ ನೀಡಲು ಅವಕಾಶ ನೀಡಲಾಗಿದೆ ಎಂದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಮತ ಎಣಿಕೆ ನಡೆಯಲಿದೆ. ಸುಮಾರು 125 ಮಂದಿ ಏಜೆಂಟರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಹಾಗೂ ಅಂಚೆ ಮತಪತ್ರಗಳ ಎಣಿಕೆಗೆ ಒಟ್ಟು 12 ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆದು ಬೆಳಿಗ್ಗೆ 8 ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನ ಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಡೆಯಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ಭದ್ರತೆ ಒದಗಿಸಲು ಒಟ್ಟಾರೆ 1800 ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಎಎಸ್ಪಿ,3 ಡಿಎಸ್ಪಿ, 18 ಮಂದಿ ಸಿಪಿಐ,51 ಸ ಸಿಪಿಐ , 833 ಮಂದಿ ಎಎಸ್ ಐ ಸೇರಿದಂತೆ ಪೋಲೀಸ್ ಪೇದೆಗಳು ಕಾರ್ಯನಿರ್ವಹಿಸುವರು ಎಂದರು. ಮತ ಎಣಿಕೆ ದಿನದಂದು ಪ್ರಮುಖ ರಾಜಕೀಯ ಪಕ್ಷಗಳ ಧುರೀಣರ ಮನೆಗಳಿಗೂ ಭದ್ರತೆ ಒದಗಿಸಲಾಗುತ್ತಿದೆ ಎಂದರು.