ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ರೀ-ಸರ್ವೆ ನಡೆಸಲಾಗುವುದು. ಯಾವುದೇ ಅರ್ಹ ಫಲಾನುಭವಿಯನ್ನು ಗ್ಯಾರಂಟಿ ಯೋಜನೆಗಳಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.
ಮೂರು ವರ್ಷಗಳಿಂದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಆದರೂ ಬಿಜೆಪಿ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಇದೆಲ್ಲಾ ಬಿಜೆಪಿಯವರ ಅಪಪ್ರಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಗಳಿಗೆ ನೀರು ಹರಿಸಿರುವುದು ಸರಿಯಲ್ಲ: ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ಹರಿಸಿರುವುದು ಸರಿಯಲ್ಲ. ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಹರಿದುಬರುವ ಒಳಹರಿವಿನ ಪ್ರಮಾಣವನ್ನು ಗಮನಿಸಿ ಐಸಿಸಿ ಸಭೆ ಕರೆಯಲಾಗುವುದು ಎಂದು ಸಚಿವರು ತಿಳಿಸಿದರು.ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಿಲ್ಲ. ಬಿಜೆಪಿ ನಾಯಕರು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಮಠ-ಮಾನ್ಯಗಳ ವಿಚಾರದಲ್ಲಿ ಕಾಂಗ್ರೆಸ್‌ಗೆ ಇರುವಷ್ಟು ಗೌರವ ಬಿಜೆಪಿಗೆ ಇಲ್ಲ. ಅವರಿಂದ ನಾವು ನೀತಿ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಂಗಡಗಿ ಹೇಳಿದರು.
ಚುನಾವಣಾ ಆಯುಕ್ತರನ್ನು ರಕ್ಷಿಸುವ ವಿಚಾರದಲ್ಲಿ ದಲಿತ ಅಸ್ತ್ರ ಬಳಸುತ್ತಿರುವುದು ಸರಿಯಲ್ಲ. ದೇಶಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸುವವರೇ ಇದೀಗ ಈ ವಿಚಾರದಲ್ಲಿ ಬೇರೆ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಟೀಕಿಸಿದರು.