ಮಲ್ಲಾಪುರದಲ್ಲಿ ಮೊದಲ ಶಾಖೆ ಆರಂಭಿಸುವ ಮೂಲಕ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಸಂಸ್ಥೆ ಇಂದು 111 ಶಾಖೆಗಳನ್ನು ಹೊಂದಿ ಉತ್ತರ ಕನ್ನಡದ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ.
ಕಾರವಾರ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2025- 26ನೇ ಸಾಲಿನಲ್ಲಿ ₹9.11 ಕೋಟಿ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು. ನಗರದ ಫೀನಿಕ್ಸ್ ಪ್ಯಾರಾಡೈಸ್‌ನಲ್ಲಿರುವ ಸಹಕಾರಿ ಸಭಾಭವನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಮಲ್ಲಾಪುರದಲ್ಲಿ ಮೊದಲ ಶಾಖೆ ಆರಂಭಿಸುವ ಮೂಲಕ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಸಂಸ್ಥೆ ಇಂದು 111 ಶಾಖೆಗಳನ್ನು ಹೊಂದಿ ಉತ್ತರ ಕನ್ನಡದ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. ಇದಕ್ಕೆ ಸದಸ್ಯರ ಕೊಡುಗೆ ಹಾಗೂ ಸಹಕಾರವೇ ಪ್ರಮುಖ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಠೇವಣಿ ಸಂಗ್ರಹಣೆ 2025- 26ನೇ ಸಾಲಿನಲ್ಲಿ ₹1,605 ಕೋಟಿಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ₹134 ಕೋಟಿ ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ₹1,316 ಕೋಟಿ ಸಾಲ ವಿತರಿಸಲಾಗಿದೆ. ₹53.74 ಕೋಟಿ ಶೇರು ಬಂಡವಾಳ ಹೊಂದಿದ್ದು, 3,22,369 ಶೇರು ಸದಸ್ಯರಿಗೆ ಶೇ. 8ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದರು. ಕೋವಿಡ್ ಅವಧಿಯಿಂದ ಸಾಲ ವಸೂಲಾತಿಯಲ್ಲಿ ಕೆಲವು ಅಡಚಣೆಗಳಿದ್ದರೂ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾಲಗಾರರಿಗೆ ಮರಣೋತ್ತರ ಋಣ ಪರಿಹಾರ ನಿಧಿ ಯೋಜನೆ ಜಾರಿಯಲ್ಲಿದ್ದು, 16 ಪ್ರಕರಣಗಳಲ್ಲಿ ₹16.36 ಲಕ್ಷ ಕ್ಲೈಮ್ ಪಾವತಿಸಲಾಗಿದೆ. ಸಂಸ್ಥೆಯಲ್ಲಿ 1,308 ಸಿಬ್ಬಂದಿ ಹಾಗೂ 312 ಪಿಗ್ಮಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಾಗಿ ಗ್ರೂಪ್ ಇನ್ಶುರೆನ್ಸ್ ಯೋಜನೆಯಡಿ 18 ಕ್ಲೈಮ್‌ಗಳಲ್ಲಿ ₹10.62 ಲಕ್ಷ ಪ್ರಯೋಜನ ನೀಡಲಾಗಿದೆ ಎಂದು ತಿಳಿಸಿದರು. ಸಹಕಾರಿಯ 111 ಶಾಖೆಗಳಲ್ಲಿ 95 ಶಾಖೆಗಳು ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರಿಗೆ ಅನುಕೂಲವಾಗುವಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಫಾದರ್ ಡೆಸ್ಮಂಡ್ ರೆಬೆಲ್ಲೊ ಉದ್ಘಾಟಿಸಿ, ಬೈಬಲ್ ವಾಚಿಸಿ, ಸದಸ್ಯರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ ಹಾಗೂ ಸಿಬ್ಬಂದಿ-ಗ್ರಾಹಕರ ನಡುವಿನ ಉತ್ತಮ ಬಾಂಧವ್ಯವೇ ಸೈಂಟ್ ಮಿಲಾಗ್ರಿಸ್ ಸಹಕಾರಿಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದರು. ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ರಾಯ್ಕರ್ ಸಭೆಯ ವಿಷಯಪಟ್ಟಿ ಹಾಗೂ ವಾರ್ಷಿಕ ವರದಿ ಮಂಡಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ವೆರ್ಣೇಕರ್ ಹಾಗೂ ಸಾಲ ವಸೂಲಾತಿ ವ್ಯವಸ್ಥಾಪಕ ಅರುಣ ನಾಯ್ಕ್ ಅಗತ್ಯ ಮಾಹಿತಿಗಳನ್ನು ನೀಡಿದರು. ನಿರ್ದೇಶಕ ಜುಜೆ ಫರ್ನಾಂಡಿಸ್ ಮಾತನಾಡಿ, ಆಡಳಿತ ಮಂಡಳಿಯ ದೂರದೃಷ್ಟಿಯ ನಿರ್ಧಾರಗಳು, ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಸದಸ್ಯರ ನಿರಂತರ ಸಹಕಾರ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಿದೆ ಎಂದರು. ವ್ಯವಸ್ಥಾಪಕ ನಿರ್ದೇಶಕಿ ಡೆಮಿ ಫರ್ನಾಂಡಿಸ್ ಸ್ವಾಗತಿಸಿದರು. ಪ್ರಧಾನ ಕಚೇರಿಯ ಠೇವಣಿ ವಿಭಾಗದ ಅಧಿಕಾರಿ ವಿನಯ ಹೆಗಡೆ ನಿರೂಪಿಸಿದರು. ಆಡಳಿತ ವಿಭಾಗದ ಸಿಬ್ಬಂದಿ ಉಷಾ ಮುದಗೇಕರ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.