ಮಾರುತಿ ಶಿಡ್ಲಾಪೂರ
ಹಾನಗಲ್ಲಿನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಧರ್ಮಾ ನದಿಯು ಅಶೋಕ ದಾಸರ ಅವರ ಹೊಲದ ಹತ್ತಿರ ದಡವನ್ನು ಸೀಳಿ ಕೃಷಿ ಜಮೀನನ್ನು ಪ್ರವೇಶಿಸುತ್ತದೆ. ಇದರಿಂದ ಅಲ್ಲಿ ಬೆಳೆದ ಭತ್ತ, ಗೋವಿನ ಜೋಳ, ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಳಾಗಿ ಉತ್ತಿ ಬಿತ್ತಿದ ಬೆಳೆ ಕೈಗೆ ಸಿಗದಂತಾಗುವ ಆತಂಕವನ್ನು ಇಲ್ಲಿನ ರೈತರು ಪ್ರತಿ ವರ್ಷ ಎದುರಿಸುತ್ತಿದ್ದಾರೆ. ಈಗ ಅಶೋಕ ದಾಸರ ಅವರ ಜಮೀನಿನ ಬಳಿ ಧರ್ಮಾ ನದಿಗೆ ಅಂದಾಜು ೪೦ ಮೀಟರ್ ಉದ್ದದ ಹಾಗೂ ೧೨ ಅಡಿ ಎತ್ತರದ ತಡೆಗೋಡೆ ನಿರ್ಮಿಸಿದರೆ ಮಾತ್ರ ಧರ್ಮಾ ನದಿಯ ನೀರು ಜಮೀನಿಗೆ ನುಗ್ಗುವುದನ್ನು ತಡೆಯಬಹುದಾಗಿದೆ. ಈಗ ಅಲ್ಲಿನ ರೈತರೇ ಧರ್ಮಾ ನದಿಯ ದಡಕ್ಕೆ ಒಂದಷ್ಟು ಕಲ್ಲು, ಮಣ್ಣು ಹಾಕಿಕೊಂಡು ನದಿ ಭೂಮಿಗೆ ನುಗ್ಗುವುದನ್ನು ತಡೆಯಲು ಹರ ಸಾಹಸ ಮಾಡುತ್ತಿದ್ದಾರೆ.
ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವ ಕಾರಣ ಹಾನಗಲ್ಲಿನ ರೈತರು ನಾಲ್ಕೈದು ಕಿಮೀ ದೂರದಿಂದ ತಮ್ಮ ಜಮೀನಿಗೆ ಬರಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ರಾಮಲಿಂಗೇಶ್ವರ ದೇವಸ್ಥಾನದ ಬಳಿ ನದಿಗೆ ಒಂದು ಸೇತುವೆ ನಿರ್ಮಿಸಿದರೆ ಇಲ್ಲಿನ ನೂರಾರು ಎಕರೆ ಜಮೀನಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಅನುಕೂಲ ಎಂದು ದಶಕಗಳಿಂದ ರೈತರು ಸರ್ಕಾರ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.ಮಳೆಗಾಲದಲ್ಲಿ ಹಾನಗಲ್ಲಿನಿಂದ ತಮ್ಮ ಕೃಷಿ ಭೂಮಿಗೆ ತೆರಳಲು, ಕೃಷಿಗೆ ಅಗತ್ಯ ಗೊಬ್ಬರ ಹಾಗೂ ಇತರ ಸಾಮಗ್ರಿಗಳನ್ನು ಕೊಂಡೊಯ್ಯಲು ಹರ ಸಾಹಸ ಪಡಬೇಕಾಗಿದೆ. ಇದಕ್ಕಾಗಿ ತಾತ್ಕಾಲಿಕವಾಗಿ ಒಂದು ಸಿಮೆಂಟ್ ಕಂಬ ಕಟ್ಟಿಕೊಂಡು ಅದಕ್ಕೆ ಉದ್ದನೆಯ ಎರಡುಮೂರು ಕಂಬಗಳನ್ನು ಹಾಕಿಕೊಂಡು ಅತ್ಯಂತ ಆತಂಕದಲ್ಲಿ ಓಡಾಡುವಂತಾಗಿದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಇದು ಅಪಾಯಕಾರಿ ಓಡಾಟವಾಗಿದೆ.
ಪೈರು ಹಾಳು: ಧರ್ಮಾ ನದಿಯ ಹರಿವಿನಿಂದ ದಂಡೆ ಒಡೆದು ಬಿತ್ತಿದ ಭೂಮಿಯಲ್ಲಿ ನೀರು ತುಂಬಿ ಪೈರು ಹಾಳಾಗುತ್ತಿದೆ. ಮಳೆಗಾಲದಲ್ಲಿ ದೇವಸ್ಥಾನದ ದಂಡೆಯಿಂದ ಜಮೀನಿಗೆ ಹೋಗಲು ಸಾಧ್ಯವಾಗುವುದೇ ಇಲ್ಲ. ನಮ್ಮ ರೋದನ ಕೇಳುವವರೆ ಇಲ್ಲದಾಗಿದೆ. ಬೇಗ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಧರ್ಮಾ ನದಿ ದಡದ ಕೃಷಿಕ ಅಶೋಕ ದಾಸರ ತಿಳಿಸಿದರು.