ಪಿಂಚಣಿ ಯಥಾಸ್ಥಿತಿಯಲ್ಲಿ ಪರಿಷ್ಕರಿಸಬೇಕು, ಕಾರ್ಮಿಕರ ವಿರೋಧಿ ನೀತಿ ಕೈಬಿಡಬೇಕು
ಕನ್ನಡಪರಭ ವಾರ್ತೆ, ಚಿಕ್ಕಮಗಳೂರುಕಾರ್ಮಿಕರ ವಿರೋಧಿ ನೀತಿಯ ಕಾನೂನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ಹಾಗೂ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಗುರುವಾರ ನಗರದ ಆಜಾದ್ ವೃತ್ತದಲ್ಲಿ ಕೇಂದ್ರ ಸರ್ಕಾರಿ ಪಿಂಚಣಿ ದಾರರ ಒಕ್ಕೂಟ ಪ್ರತಿಭಟನೆ ನಡೆಸಿತು.ಕೇಂದ್ರ ಸರ್ಕಾರಿ ಪಿಂಚಣಿದಾರರ ಒಕ್ಕೂಟ, ಬಿಎಸ್‌ಎನ್‌ಎಲ್, ಕಾಫಿ ಮಂಡಳಿ, ಅಂಚೆ ಇಲಾಖೆ, ಅಬಕಾರಿ ಇಲಾಖೆ ಹಾಗೂ ಸಾಂಬಾರ್ ಮಂಡಳಿ ನಿವೃತ್ತ ನೌಕರರು ವಹಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಮಾ.21 ರಂದು ಕಾರ್ಮಿಕ ವಿರೋಧಿ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಹಣಕಾಸು ಮಸೂದೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರೀತಿ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿ ಪರಿಷ್ಕರಣೆ ಇರುವುದಿಲ್ಲ ಎಂಬ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸಿದರು.
1972 ರ ಪಿಂಚಣಿ ಕಾಯ್ದೆಗೆ ತಿದ್ದುಪಡಿ ತಂದು ಈ ಬಿಲ್ ಪಾಸ್ ಮಾಡಲು ಹೊರಟಿದೆ. 1983 ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ತೀರ್ಪಿನ ಪ್ರಕಾರ ಪಿಂಚಣಿ ಪರಿಷ್ಕರಿಸಿ ಹಳಬರು ಮತ್ತು ಹೊಸಬರಿಗೆ ಯಾವುದೇ ತಾರತಮ್ಯ ಇಲ್ಲ ದಂತೆ ಮಹತ್ವದ ತೀರ್ಪು ನೀಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಅದರಂತೆ ಎಲ್ಲಾ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಣೆಗೆ ಸರ್ಕಾರ ಆದೇಶ ನೀಡಿತ್ತು. ಇದೀಗ ಕೇಂದ್ರ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಈ ರೀತಿ ಪರಿಷ್ಕರಣೆ ಇಲ್ಲವೆಂದು ತೀರ್ಮಾನಿಸಿರುವುದು ಖಂಡನೀಯ ಎಂದರು.ಸರ್ಕಾರದ ಈ ನಿರ್ಧಾರದಿಂದಾಗಿ ಪಿಂಚಣಿದಾರರಿಗೆ ಆಘಾತವಾಗಿದ್ದು, ಸತತ ಬೆಲೆ ಏರಿಕೆ ಹಾಗೂ ನಿವೃತ್ತರಿಗೆ ವಯೋ ಸಹಜ ಕಾಯಿಲೆಗಳು ಬರುತ್ತಿರುವುದರಿಂದ ಬದುಕು ದುಸ್ತರವಾಗಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಪಿಂಚಣಿ ಪರಿಷ್ಕರಿಸುವುದಿಲ್ಲ ಎಂಬ ಹುನ್ನಾರ ಸಂವಿಧಾನ ಬಾಹಿರ ಎಂದು ದೂರಿದರು.
ಈ ಸಂಬಂಧ ಸಂವಿಧಾನದಲ್ಲಿ ಪಿಂಚಣಿದಾರರಿಗೆ ರಕ್ಷಣೆ ನೀಡಿದ್ದು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರ ನೇತೃತ್ವದ ಸಂವಿಧಾನ ಪೀಠ ಪಿಂಚಣಿಯಲ್ಲಿ ಯಾವುದೇ ತಾರತಮ್ಯ ಮಾಡುವ ಹಾಗಿಲ್ಲ, ಪಿಂಚಣಿ ಪರಿಷ್ಕರಣೆ ನಿರಂತರವಾಗಿರಬೇಕು ಎಂದು 1983 ರಲ್ಲಿ ಮಹತ್ವದ ತೀರ್ಪು ಕೊಟ್ಟಿದ್ದು, ಈಗಿನ ಕೇಂದ್ರ ಸರ್ಕಾರ ಅದನ್ನು ಧಿಕ್ಕರಿಸಿ ಪಿಂಚಣಿ ಪರಿಷ್ಕರಣೆ ಮಾಡದಂತೆ ನಿರ್ಧರಿಸಿರುವುದನ್ನು ಖಂಡಿಸಿದರು.ಸರ್ಕಾರದ ಈ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಬಿಎಸ್‌ಎನ್‌ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಕಾರ್ಯ ದರ್ಶಿ ಹಿರಿಯಣ್ಣ, ಮುಖಂಡರಾದ ರಾಘವೇಂದ್ರ, ವೆಂಕಟೇಶ್, ಕಾಫಿ ಬೋರ್ಡ್ ನ ವೆಂಕಟೇಶ್, ರಾಜೇಂದ್ರ ಅನ್ವರ್, ಹುಸೇನ್, ಅಬೂಬಕರ್ ಹಾಗೂ ನಿವೃತ್ತ ನೌಕರರು ಪಾಲ್ಗೊಂಡಿದ್ದರು. 3 ಕೆಸಿಕೆಎಂ 1ಕಾರ್ಮಿಕರ ವಿರೋಧಿ ನೀತಿ ಕಾನೂನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ಹಾಗೂ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಗುರುವಾರ ನಗರದ ಆಜಾದ್ ವೃತ್ತದಲ್ಲಿ ಕೇಂದ್ರ ಸರ್ಕಾರಿ ಪಿಂಚಣಿ ದಾರರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.