ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದೇವತೆಗಳ ಜಾತ್ರಾ ಉತ್ಸವ ಮೆರವಣಿಗೆ ಇತ್ತೀಚೆಗೆ ಶ್ರದ್ಧಾ-ಭಕ್ತಿಯಿಂದ ಸಕಲ ವಾದ್ಯ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ಗ್ರಾಮದೇವತೆಗಳ ಮಂಟಪದಿಂದ ಪೂಜಾ ವಿಧಿ ವಿಧಾನದೊಂದಿಗೆ ಸಂಜೆ 6ಕ್ಕೆ ಉತ್ಸವದ ಮೆರವಣಿಗೆ ಸಾಗಿ ಮಾರುತೇಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನ, ಶಿವಶರಣರಾದ ಅಣ್ಣಯ್ಯ-ತಮ್ಮಯ್ಯನವರ ಮನೆಯಿಂದ ಪೂಜೆಗೊಂಡು ಬಳಿಕ ದ್ಯಾಮಮ್ಮ ದೇವಸ್ಥಾನಕ್ಕೆ ತಲುಪಿತು.
ದ್ಯಾಮಮ್ಮ ದೇವಸ್ಥಾನದಲ್ಲಿ ಹೋಮ-ಹವನ ಪೂಜಾ ಕೈಂಕರ್ಯಗಳು ನಡೆದು ಮೆರವಣಿಗೆ ಮೂಲಕ ದುರಗಮ್ಮ ದೇವಸ್ಥಾನಕ್ಕೆ ತಲುಪಿಸಲಾಯಿತು.ಜಾತ್ರೆ ನಿಮಿತ್ತ ಮೆರವಣಿಗೆ ಮಾರ್ಗದಲ್ಲಿ ಮನೆಗಳ ಮುಂದೆ ವಿವಿಧ ವಿಶೇಷ ಚಿತ್ತಾರಗಳ ರಂಗೋಲಿ ಬಿಡಿಸಲಾಗಿತ್ತು. ಮೆರವಣಿಗೆ ಆಗಮಿಸುತ್ತಿದ್ದಂತೆ ದೇವತೆಗಳಿಗೆ ನಮಸ್ಕರಿಸುವ ದೃಶ್ಯ ಎಲ್ಲರಲ್ಲಿ ಸಾಮಾನ್ಯವಾಗಿತ್ತು. ಈ ಭವ್ಯ ಮೆರವಣಿಗೆಯುದ್ದಕ್ಕೂ ಸಾಗಿದಾಗ ಭಕ್ತರು ಉಧೋ....ಉಧೋ... ಎನ್ನುವ ಜೈ ಘೋಷಣೆಗಳು ಮುಗಿಲು ಮುಟ್ಟಿತು.
ವಿವಿಧ ಬಗೆಯ ಹೂವಿನಿಂದ ಅಲಂಕೃತಗೊಂಡು ವಿರಾಜಮಾನರಾಗಿ ಕುಳಿತಿದ್ದ ದೇವತೆಯರು ಕಂಗೊಳಿಸಿದರು. ವಿವಿಧ ವಿಶೇಷ ಧಾರ್ಮಿಕ ಸೇವೆಗಳು, ಹರಕೆ, ಕಾಣಿಕೆಗಳನ್ನು ದೇವತೆಯರಿಗೆ ಭಕ್ತರು ಸಮರ್ಪಣೆ ಮಾಡಿದರು. ದೇವತೆಯರಿಗೆ ಸೀರೆ, ಖಣ, ಬಳೆ, ಅರಿಷಿಣಕೊಂಬು, ಕೊಬ್ಬರಿ ಬಟ್ಟಲು. ಉತ್ತತ್ತಿ, ಎಲಿ, ಅಡಕೆ, ಉಡಿ ತುಂಬಿ ದೇವತೆಗಳಲ್ಲಿ ಪ್ರಾರ್ಥಿಸಿದರು. ಐದು ದಿನಗಳ ವರೆಗೆ ಯಶಸ್ವಿಯಾಗಿ ಜರುಗಿ ಜಾತ್ರೆ ಸಂಪನ್ನಗೊಂಡಿತು.