ಶಿವಮೊಗ್ಗ: ನಿಯಮಗಳಿಗೆ ಒಳಪಟ್ಟು ಸುನ್ನಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಯಾರಿಗೂ ತೊಂದರೆ ಕೊಡಬೇಕು ಎಂಬ ಇರಾದೆ ನಮಗಿಲ್ಲ. ಮೈದಾನ ಪವಿತ್ರವಾಗಿರಬೇಕು ಎಂಬುವುದೇ ನಮ್ಮ ಅಭಿಲಾಷೆ ಎಂದು ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯಾ ಪ್ರಮುಖ ಸಿರಾಜ್ ಅಹಮ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಿಲಕ್ ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗೆ ಸೇರಿದೆ. ಇದು ಈಗಾಗಲೇ ಮುನ್ಸಿಪಾಲ್ ಖಾತೆಯನ್ನು ಹೊಂದಿದೆ. ಇದರ ನಿರ್ವಹಣೆಯನ್ನು ಸುನ್ನಿ ಜಾಮೀಯಾ ಮಸೀದಿ ವತಿಯಿಂದ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಈದ್ಗಾ ಮೈದಾನವನ್ನು ಕೆಲವು ಕಿಡಿಗೇಡಿಗಳು ಅಪಪವಿತ್ರ ಮಾಡುತ್ತಿದ್ದಾರೆ. ಗಲೀಜು ಮಾಡುತ್ತಿದ್ದಾರೆ. ಮುಸ್ಲಿಂರ ಪವಿತ್ರ ಸ್ಥಳವಾದ ಈ ಜಾಗದಲ್ಲಿ ಈ ರೀತಿ ಅಪವಿತ್ರ ಮಾಡುತ್ತಿರುವುದನ್ನು ಕಂಡು ನಮ್ಮ ಸಮಿತಿಯಿಂದ ಸಿಸಿ ಕ್ಯಾಮರಾ ಅಳವಡಿಸಿ ಅದನ್ನು ನಿರ್ವಹಣೆ ಮಾಡಲು ಹೊರಟಿದ್ದೇವೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು.ಈ ಈದ್ಗಾ ಮೈದಾನದ ಮೂಲ ಎಲ್ಲಿಯದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಜಾಗವನ್ನು ವಕ್ಫ್ ಆಸ್ತಿಗೆ ಸೇರಿಸಿಕೊಳ್ಳುವ ಮುನ್ನ ಗೆಜೆಟ್ ನೋಟಿಫೀಕೇಷನ್ ಆಗುತ್ತೆ, ಗೆಜೆಟ್ ನೋಟಿಫೀಕೇಷನ್‍ನಲ್ಲಿ ಈ ಎಲ್ಲಾ ವಿವರಗಳು ಲಭ್ಯವಿದೆ. ಸಂಪೂರ್ಣ ವಿವರನ್ನು ನಾವು ಗೆಜೆಟ್‍ನಿಂದ ಪಡೆದು ನಂತರ ಮತ್ತೆ ತಿಳಿಸುತ್ತೇವೆ. ಆದರೆ ಸದ್ಯಕ್ಕೆ ಈ ಜಾಗ ನಮ್ಮದು ಎನ್ನುವುದಕ್ಕೆ ನಮ್ಮಲ್ಲಿ ಮಹಾನಗರ ಪಾಲಿಕೆ ಮಾಡಿಕೊಟ್ಟ ಖಾತೆಯಿದೆ. ಈ ಖಾತೆಯ ಆಧಾರದ ಮೇಲೆ ಕೇಳುತ್ತಿದ್ದೇವೆ ಎಂದರು.ಮರ್ಕಜ ಸುನ್ನಿ ಮಸೀದಿಯಾ ಅಧ್ಯಕ್ಷ ಮುನ್ನಾವರ ಪಾಶಾ ಮಾತನಾಡಿ, ಹಿಂದೂ ಮುಸ್ಲಿಂರು ಒಟ್ಟಾಗಿ ಇರಬೇಕು ಎಂಬ ಭಾವನೆ ಕೂಡ ನಮ್ಮದೆ, ಆಗಾಗಿ ಇಲ್ಲಿ ಯಾವುದೇ ಕಟ್ಟಡವನ್ನು ಕಟ್ಟುವುದಿಲ್ಲ. ಕಟ್ಟಲು ಬರುವುದಿಲ್ಲ. ಆದರೆ ಜಾಗವನ್ನು ಸಂರಕ್ಷಿಸಬೇಕಾದ ಹೊಣೆ ನಮ್ಮದೇ ಆಗಿದೆ. ಇದಕ್ಕಾಗಿ ಕೆಲವು ನೀತಿ ನಿಯಮಗಳನ್ನು ರೂಪಿಸುತ್ತೇವೆ. ಮತ್ತು ನಿಯಮಗಳಿಗೆ ಒಳಪಟ್ಟು ಸಾರ್ವಜನಿಕರ ಸೇವೆಗೆ ಬಿಡಲು ನಮ್ಮ ತಕರಾರು ಏನು ಇಲ್ಲ. ಅಲ್ಲಿಯವರೆಗೆ ನಮ್ಮ ಸ್ಥಳವನ್ನು ಸಂರಕ್ಷಣೆಯನ್ನು ಮಾಡಿಕೊಳ್ಳಬೇಕಾದ ಹೊಣೆ ನಮ್ಮದೇ. ಇದಕ್ಕೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸತ್ತಾರ್‍ಬೇಗ್, ನಿಸಾರ್ ಅಹಮ್ಮದ್, ಪೈರೋಜ್, ನಯಾಜ್ ಅಹಮ್ಮದ್‍ಖಾನ್, ಪರ್ವೀಜ್ ಅಹಮ್ಮದ್ ಮುಂತಾದವರು ಇದ್ದರು.