ಅಕಾಲಿಕ ಮಳೆಗೆ ಬ್ಯಾಡಗಿ ಮೆಣಸಿನಕಾಯಿ ವಹಿವಾಟಿಗೆ ಅಡ್ಡಿ : ಏಕಾಏಕಿ ಟೆಂಡರ್ ಪ್ರಕ್ರಿಯೆಯ ಸ್ಥಗಿತ

KannadaprabhaNewsNetwork |  
Published : Apr 04, 2025, 12:49 AM ISTUpdated : Apr 04, 2025, 12:42 PM IST
ಬ್ಯಾಡಗಿಯ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಚೀಲಗಳನ್ನು ತಾಡಪತ್ರಿಯಿಂದ ಮುಚ್ಚಲಾಯಿತು. | Kannada Prabha

ಸಾರಾಂಶ

ಬಹುದೊಡ್ಡ ಅನಾಹುತ ಸೃಷ್ಟಿಸುವ ಭಯದಲ್ಲಿದ್ದ ವರ್ತಕರು ಹಾಗೂ ದಲಾಲರು, ಏಕಾಏಕಿ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಲ್ಲದೇ ಎಲ್ಲ ಚೀಲಗಳನ್ನು ಪ್ಲಾಸ್ಟಿಕ್ ಹೊದಿಕೆ ಹಾಗೂ ತಾಡಪಾಲನಿಂದ ಮುಚ್ಚುವ ಮೂಲಕ ಮಳೆ ನೀರಿಗೆ ತೊಯ್ಯದಂತೆ ಮುಚ್ಚುವ ಮೂಲಕ ರೈತರಿಗೆ ಅಗಬೇಕಾಗಿದ್ದ ನಷ್ಟವನ್ನು ತಡೆಹಿಡಿದರು.

ಬ್ಯಾಡಗಿ: ಗುರುವಾರ ಸುರಿದ ಅಕಾಲಿಕ ಮಳೆಯಿಂದ ಇಲ್ಲಿನ ಎಪಿಎಂಸಿಯಲ್ಲಿ ವ್ಯಾಪಾರಕ್ಕೆ ತಂದಿದ್ದ ಒಣಮೆಣಸಿನಕಾಯಿ ರಕ್ಷಿಸಿಕೊಳ್ಳಲು ರೈತರು, ವರ್ತಕರು ಪರದಾಡುವಂತಾಯಿತು. ಅಲ್ಲದೇ ತಾಲೂಕಿನ ವಿವಿಧೆಡೆ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಂಡಿತು. ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಸುಮಾರು 2 ತಾಸು ಮಳೆ ಸುರಿಯಿತು. ಮತ್ತೆ ಮಧ್ಯಾಹ್ನ ಸುಮಾರು 2 ತಾಸಿಗೂ ಹೆಚ್ಚು ಸಮಯ ಮಹಾಮಳೆ ಸುರಿಯಿತು. ಪಟ್ಟಣದಲ್ಲಿ ಬಹುತೇಕ ಚರಂಡಿಯಲ್ಲಿ ಕಸಕಡ್ಡಿ ಸೇರಿಕೊಂಡು ರಸ್ತೆಗಳ ಮೇಲೆಲ್ಲ ಮಳೆ ನೀರು ಹರಿಯಿತು.

ವಾಹನ ಸಂಚಾರ ಸ್ಥಗಿತ: ಮೋಟೆಬೆನ್ನೂರಿನ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡು ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಸರ್ವೀಸ್ ರಸ್ತೆಗಳ ಮೂಲಕ ವಾಹನ ಸಂಚಾರ ನಡೆಯುತ್ತಿದೆ. ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಮುಂದಿನ ದಾರಿ ಅರಿಯದ ಚಾಲಕರು ತಮ್ಮ ವಾಹನಗಳನ್ನು ರಸ್ತೆ ಬದಿ ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಿಕೊಂಡಿದ್ದ ದೃಶ್ಯಗಳು ಕಂಡುಬಂದವು.

ಮಾರುಕಟ್ಟೆ ವಹಿವಾಟಿಗೆ ಅಡ್ಡಿ: ಸ್ಥಳೀಯ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಎಂದಿನಂತೆ 2.19 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿತ್ತು. ಇಷ್ಟೊಂದು ಪ್ರಮಾಣದ ಆವಕವಾದ ನಡುವೆ ಏಕಾಏಕಿ ಮಳೆ ಆರಂಭಗೊಂಡಿತು, ಬಹುದೊಡ್ಡ ಅನಾಹುತ ಸೃಷ್ಟಿಸುವ ಭಯದಲ್ಲಿದ್ದ ವರ್ತಕರು ಹಾಗೂ ದಲಾಲರು, ಏಕಾಏಕಿ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಲ್ಲದೇ ಎಲ್ಲ ಚೀಲಗಳನ್ನು ಪ್ಲಾಸ್ಟಿಕ್ ಹೊದಿಕೆ ಹಾಗೂ ತಾಡಪಾಲನಿಂದ ಮುಚ್ಚುವ ಮೂಲಕ ಮಳೆ ನೀರಿಗೆ ತೊಯ್ಯದಂತೆ ಮುಚ್ಚುವ ಮೂಲಕ ರೈತರಿಗೆ ಅಗಬೇಕಾಗಿದ್ದ ನಷ್ಟವನ್ನು ತಡೆಹಿಡಿದರು. 

ಟೆಂಡರ್ ಅವಧಿ ಹೆಚ್ಚಿಸಿದ ಎಪಿಎಂಸಿ: ಮಳೆ ಸ್ಥಗಿತಗೊಂಡ ಬಳಿಕ ಎಪಿಎಂಸಿ ಆಡಳಿತಾಧಿಕಾರಿ ಎಸ್.ಜಿ. ನ್ಯಾಮಗೌಡ ಅವರು, ಟೆಂಡರ್ ಹಾಕುವ ಅವಧಿ 2 ತಾಸು ವಿಸ್ತರಿಸಿದರು. ದೂರದ ಆಂಧ್ರಪ್ರದೇಶ ಹಾಗೂ ತೆಲಂಗಾಣ ಇನ್ನಿತರ ಕಡೆಗಳಿಂದ ಆಗಮಿಸಿದ್ದ ರೈತರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಂಡಿದ್ದಾಗಿ ಕನ್ನಡಪ್ರಭಕ್ಕೆ ತಿಳಿಸಿದ ಅವರು, ಈ ವೇಳೆ ಬಹುತೇಕ ವರ್ತಕರು ಮರಳಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾತ್ಮಕ ದರಗಳನ್ನು ನೀಡುವಲ್ಲಿ ಸಹಕಾರಿಯಾಯಿತು.

ಬಿಗಿ ಭದ್ರತೆ ನಡುವೆ ಆರಂಭವಾದ ತೂಕ: ಸೀಸನ್ ಆರಂಭದಿಂದಲೂ ಬಿಗಿ ಭದ್ರತೆ ಏರ್ಪಡಿಸಿರುವ ಪೊಲೀಸರು ಎಂದಿನಂತೆ ಪಥಸಂಚಲನ ನಡೆಸಿದರು. ಗುರುವಾರ ಸುರಿದ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ದರಗಳಲ್ಲಿ ಭಾರಿ ಪ್ರಮಾಣದ ಇಳಿಕೆ ಕಾಣಲಿದೆಯೆಂಬ ಮುನ್ಸೂಚನೆ ನಡುವೆ ಪ್ರಾಂಗಣದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಮಾರುಕಟ್ಟೆಯೆಲ್ಲೆಡೆ ತೀವ್ರ ನಿಗಾ ವಹಿಸಿದ್ದರು. ಗುರುವಾರ 2 ಬಾರಿ ಪಥಸಂಚಲನ ನಡೆಸಿದ ಪೊಲೀಸರು ರೈತರು ಚೀಲ ಸುಲಲಲಿತವಾಗಿ ತೂಕ ನಡೆಸಲು ಅನುವು ಮಾಡಿಕೊಟ್ಟರು. 

ಗುರುವಾರ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹1989, ಗರಿಷ್ಠ 22218, ಡಬ್ಬಿತಳಿ ಕನಿಷ್ಠ ₹2259, ಗರಿಷ್ಠ ₹26093, ಗುಂಟೂರು ಕನಿಷ್ಠ ₹709, ಗರಿಷ್ಠ ₹13009ಕ್ಕೆ ಮಾರಾಟವಾಗಿವೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ