ನಿವೃತ್ತ ನೌಕರರು ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ: ಕೆ.ಎಂ. ಹೇಮಯ್ಯಸ್ವಾಮಿ

KannadaprabhaNewsNetwork |  
Published : Aug 26, 2026, 02:45 AM IST
ಕಂಪ್ಲಿಯಲ್ಲಿ ನಡೆದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ 8ನೇ ಸಮಾವೇಶದಲ್ಲಿ 70 ವರ್ಷ ಪೂರೈಸಿದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಎಂ.ಎಸ್. ಗಂಗಾಧರಯ್ಯ, ಕೆ.ಎಂ. ಹೇಮಯ್ಯಸ್ವಾಮಿ, ಡಿ.ವಿ. ಸುಬ್ಬಾರಾವ್, ಎಚ್. ಜಗದೀಶ್ ಸೇರಿದಂತೆ ಪ್ರಮುಖರು ಇದ್ದರು. | Kannada Prabha

ಸಾರಾಂಶ

ನಿವೃತ್ತ ನೌಕರರು ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯದಿಂದ ಜೀವನ ನಡೆಸುವುದರ ಜತೆಗೆ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಹೇಳಿದರು.

ಕಂಪ್ಲಿ: ನಿವೃತ್ತ ನೌಕರರು ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯದಿಂದ ಜೀವನ ನಡೆಸುವುದರ ಜತೆಗೆ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಹೇಳಿದರು.

ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ 8ನೇ ನಿವೃತ್ತ ನೌಕರರ ಸಮಾವೇಶ ಹಾಗೂ 70 ವರ್ಷ ಪೂರೈಸಿದ ನಿವೃತ್ತ ನೌಕರರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರು ತಮ್ಮ ಸೇವಾ ಅವಧಿಯಲ್ಲಿ ಗಳಿಸಿದ ಅನುಭವ ಹಾಗೂ ಜ್ಞಾನವನ್ನು ಸಮಾಜದ ಒಳಿತಿಗಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ನಿವೃತ್ತಿ ಎಂದರೆ ಸೇವಾ ಜೀವನಕ್ಕೆ ಮಾತ್ರ ವಿರಾಮವಾಗಿದ್ದು, ಸಾಮಾಜಿಕ ಚಟುವಟಿಕೆಗಳಿಂದ ದೂರವಾಗುವಂತಿಲ್ಲ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಕುಟುಂಬ ಹಾಗೂ ಸಮಾಜದೊಂದಿಗೆ ಸಕ್ರಿಯವಾಗಿ ಬೆರೆಯಬೇಕು ಎಂದು ಸಲಹೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಸರ್ಕಾರಿ ನೌಕರರಿಗೆ ಸಂಧ್ಯಾಕಿರಣ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಜತೆಗೆ, 70 ವರ್ಷ ಪೂರೈಸಿದ ನಿವೃತ್ತ ನೌಕರರಿಗೆ ಶೇ.10ರಷ್ಟು ಹೆಚ್ಚುವರಿ ಪಿಂಚಣಿ ನೀಡಬೇಕು. ನಿವೃತ್ತ ನೌಕರರು ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಅಂತ್ಯಕ್ರಿಯೆ ನೆರವಿಗಾಗಿ ₹10 ಸಾವಿರ ಸಹಾಯಧನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ನಿವೃತ್ತ ನೌಕರರ ಹಲವು ವರ್ಷಗಳ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಈಡೇರಿಸಬೇಕು. ವಯೋವೃದ್ಧ ನಿವೃತ್ತ ನೌಕರರಿಗೆ ಅಗತ್ಯವಿರುವ ವೈದ್ಯಕೀಯ ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸುವ ಮೂಲಕ ಅವರ ನಿವೃತ್ತ ಜೀವನ ನೆಮ್ಮದಿಯಿಂದ ಸಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ 70 ವರ್ಷ ಪೂರೈಸಿದ ಹಿರಿಯ ನಿವೃತ್ತ ನೌಕರರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ನಿವೃತ್ತ ನೌಕರರು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸುಬ್ಬಾರಾವ್, ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ಎಚ್. ಜಗದೀಶ್, ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್. ಪೋಳ, ಅಕ್ಕನ ಬಳಗದ ಅಧ್ಯಕ್ಷೆ ಡಾ. ಶಾರದಾ ಜ. ಹಿರೇಮಠ, ಸಂಘದ ಪದಾಧಿಕಾರಿಗಳಾದ ವಿ. ನಾರಾಯಣರೆಡ್ಡಿ, ಎ. ಗುರುಮೂರ್ತಿ, ಜೆ. ಬೆಟ್ಟದಪ್ಪ, ವೀರಯ್ಯ ಸಾಲಿಮಠ, ಜಿ. ಆಂಜನೇಯಲು, ಟಿ. ಶಶಿಧರ, ಬಿ. ವೀರೇಶಪ್ಪ, ಷಣ್ಮುಖಪ್ಪ ಚಿತ್ರಗಾರ್ ಸೇರಿದಂತೆ ಸಂಘದ ಸದಸ್ಯರು ಹಾಗೂ ನಿವೃತ್ತ ನೌಕರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲು ಅರಣ್ಯದಲ್ಲಿ ಕಳ್ಳ ಬೇಟೆ ಯತ್ನ: ಮೂವರು ವಶಕ್ಕೆ
ಕೊಡಗಿನಲ್ಲಿ ಮುಸಲಧಾರೆ: ತ್ರಿವೇಣಿ ಸಂಗಮ ಮುಳುಗಡೆ