- ನಿರಾವರಿ ಇಲಾಖೆಯ ನಿವೃತ್ತ ಎಸ್ಇ ಎಚ್. ರಮೇಶ್
ಕನ್ನಡಪ್ರಭ ವಾರ್ತೆ ಮೈಸೂರುಮಳೆ ನೀರನ್ನು ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುವುದಿಲ್ಲ ಎಂದು ನಿರಾವರಿ ಇಲಾಖೆಯ ನಿವೃತ್ತ ಎಸ್ಇ ಎಚ್. ರಮೇಶ್ ತಿಳಿಸಿದರು.
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಎಂಜಿನಿಯರುಗಳ ಸಂಸ್ಥೆಯು ಸಭಾಂಗಣದಲ್ಲಿ ಸರ್.ಎಂ. ವಿಶೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಳೆ ನೀರಿನ ಸಂಗ್ರಹಣೆ ಮತ್ತು ಬೋರ್ ವೆಲ್/ ತೆರೆದ ಬಾವಿ ಅಂತರ್ಜಲ ಅಭಿವೃದ್ಧಿಯ ಬಗ್ಗೆ ಪ್ಲಂಬಿಂಗ್ ತಂತ್ರಜ್ಞಾನಗಳು ಕುರಿತು ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, 117 ಸೆಂ.ಮೀ ಮಳೆಯಾಗುತ್ತದೆ. ಹಲವಾರು ಅತ್ಯುತ್ತಮ ಜೀವವೈವಿದ್ಯತೆಯಿದ್ದು, 2100 ಹೆಚ್ಚಿನ ನದಿಗಳನ್ನ ಭಾರತ ಹೊಂದಿದೆ. ನಮ್ಮ ದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಸೇರಿದಂತೆ ಅವಶ್ಯಕತೆಗೂ ಅಧಿಕವಾಗಿ ಮಳೆ ಬೀಳುತ್ತದೆ. ಆದರೆ, ಮಳೆ ನೀರನ್ನ ಶೇಖರಿಸಿ, ನಿರ್ವಹಿಸುವ ಕೆಲಸವಾಗುತ್ತಿಲ್ಲ ಎಂದರು.
15 ವರ್ಷಗಳ ಹಿಂದೆ ಕಾಲಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿತ್ತು. ಎಲ್ಲಾ ಕೆರೆ, ಕಟ್ಟೆ, ನದಿಗಳು ಸಮೃದ್ಧಿಯಾಗಿ ಭರ್ತಿಯಾಗುತ್ತಿದ್ದವು. ಪ್ರಸ್ತುತ ಮಳೆ ಬೀಳುವ ಕಾಲಮಾನ ಬದಲಾಗುತ್ತಿದೆ. ನಮ್ಮ ಪೂರ್ವಿಕರು ಹಳ್ಳಿಗಳು ಮತ್ತು ಪಟ್ಟಣಗಳಿಗೆ ಕೆರೆ ಕಟ್ಟೆಗಳನ್ನು ನಿರ್ಮಿಸಿ, ನೀರಿಗಾಗಿ ಮತ್ತು ಜೀವನ ನಿರ್ವಹಣೆಗೆ ಬಳಸುತಿದ್ದರು. ಇವತ್ತಿನ ದಿನಗಳಲ್ಲಿ ಕೆರೆ ಕಟ್ಟೆಗಳನ್ನು ಮುಚ್ಚಿ, ಕಟ್ಟಡಗಳು, ಮೈದಾನಗಳು ಹಾಗೂ ಇನ್ನಿತರ ಉಪಯೋಗಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅವರು ವಿಷಾದಿಸಿದರು.ಬೇಸಿಗೆ ಕಾಲ ಬಂತೆಂದರೆ ನಲ್ಲಿಗಳಲ್ಲೂ ನೀರು ಸಿಗದೆ, ಟ್ಯಾಂಕರ್ ಮೂಲಕ ನೀರನ್ನು ಹಣ ಕೊಟ್ಟು ಕೊಂಡು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅತೀ ಹೆಚ್ಚು ಮಳೆ ಬೀಳುವ ನಮ್ಮ ದಕ್ಷಿಣ ಒಳನಾಡಿನಲ್ಲೂ ಈ ಸಮಸ್ಯೆ ಕಾಣಿಸುತ್ತಿರುವುದು ವಿಪರ್ಯಾಸ. ನಾವೆಲ್ಲರೂ ಎಚ್ಚರಿಕೆ ವಹಿಸದಿದ್ದರೆ ಮುಂದಿನ 15 ವರ್ಷಗಳಲ್ಲಿ ಮೈಸೂರಿನಲ್ಲಿ ನೀರಿನ ಅಭಾವವನ್ನು ಎದುರಿಸುವ ಸಂದರ್ಭ ಬರುತ್ತದೆ ಎಂದು ಅವರು ಎಚ್ಚರಿಸಿದರು.
ಹಿಂದೆ ಬೆಂಗಳೂರಿನಲ್ಲಿ 288 ಕೆರೆಗಳಿದ್ದವು, ಪ್ರಸ್ತುತ 33 ಕೆರೆಗಳಿವೆ. ಮೈಸೂರಿನಲ್ಲೂ ಹಲವು ಕೆರೆಗಳನ್ನು ಮುಚ್ಚಿ ವಿವಿಧ ಉಪಯೋಗಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದ ಅಂತರ್ಜಲಕ್ಕೆ ಹೊಡೆತ ಬಿದ್ದು, ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದರು.ನಾವೆಲ್ಲರೂ ಪ್ರಜ್ಞಾವಂತರಾಗಿರುವುದರಿಂದ ಅಂತರ್ಜಲ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ಮಳೆ ನೀರಿನ ಕೊಯ್ಲು ಮಾಡಿ ನಮ್ಮ ಜೀವನ ನಿರ್ವಹಣೆ ಮಾಡುವುದರ ಮೂಲಕ, ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ.ಆರ್. ದೀಪು, ಐಇಐ ಸಮಿತಿ ಸದಸ್ಯ ಎನ್.ಎಸ್. ಮಹದೇವಸ್ವಾಮಿ, ಎಂ.ಕೆ ನಂಜಯ್ಯ, ಸರ್.ಎಂ. ವಿಶೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಸ್. ಮಹೇಶ್, ಕಾರ್ಯದರ್ಶಿ ರವಿಕುಮಾರ್ ಮೊದಲಾದವರು ಇದ್ದರು.