ಕನ್ನಡಪ್ರಭ ವಾರ್ತೆ ನಾಪೋಕ್ಲು
ಚೇರಂಬಾಣೆಯ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮಕ್ಕೆ ದಿ. ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ .ಮೊಣ್ಣಪ್ಪ ಅವರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿ ಕೊಟ್ ಪಾಟ್ ಮೂಲಕ ಕರೆದರಲಾಯಿತು.
ಆ ಬಳಿಕ ಕುಟುಂಬ ಬಂಧು ಮಿತ್ರರೊಂದಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲರ ಪರವಾಗಿ ಕೋಟೆರ ಪ್ರಭು ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೇಕ್ ಅನ್ನು ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭ ಅವರ ಸಹೋದರ ಅಪ್ಪಣ್ಣ (97) ಜೊತೆಯಲ್ಲಿ ಉಪಸ್ಥಿತರಿದ್ದು ಆಗಮಿಸಿದ್ದ ಎಲ್ಲರೂ ಶತಾಯುಷಿಗೆ ತಮ್ಮ ನೆನಪಿನ ಕಾಣಿಕೆಗಳನ್ನು ನೀಡಿ ಇಬ್ಬರ ಆಶೀರ್ವಾದ ಪಡೆದುಕೊಂಡು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪ್ರೊ ಎಂ.ಡಿ ನಂಜುಂಡ, ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ ಮಂದಣ್ಣ , ನಿವೃತ್ತ ಪೊಲೀಸ್ ಅಧಿಕಾರಿ ಮಣವಟ್ಟಿರ ಸಿ.ಕುಶಾಲಪ್ಪ ಸನ್ಮಾನಿತರ ಗುಣಗಾನ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.
ಶತಾಯುಷಿ ಮೊಣ್ಣಪ್ಪ ಅವರಿಗೆ ಒಂದು ಗಂಡು ಐದು ಹೆಣ್ಣು ಮಕ್ಕಳು ಇದ್ದು ಅವರ ಮಗ ಗೋಪಾಲಕೃಷ್ಣ , ಮಗಳು ವಾಣಿ (ಉಮಾದೇವಿ) ಸೇರಿದಂತೆ ಕುಟುಂಬದ ಸದಸ್ಯರು ಬಂದು ಭಾಗವಹಿಸಿದವರನ್ನೆಲ್ಲ ಆದರದಿಂದ ಸ್ವಾಗತಿಸಿ ಅತಿಥಿ ಸತ್ಕಾರದೊಂದಿಗೆ ಕೃತಜ್ಞತೆ ಸಲ್ಲಿಸಿದರು.