- ದಾವಣಗೆರೆಯ ದಯಾ ಮರಣ ಹೋರಾಟಗಾರ್ತಿ ಕರಿಬಸಮ್ಮ ಮಾದರಿ ಕಾರ್ಯ - ಹೋರಾಟದ ಜೊತೆ ದೇಶಪ್ರೇಮ ಮೆರೆದ ಅಮ್ಮ: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಯಾ ಮರಣಕ್ಕಾಗಿ ಹೋರಾಟ ನಡೆಸಿರುವ ವಯೋವೃದ್ಧೆ, ನಿವೃತ್ತ ಶಿಕ್ಷಕಿ ಕರಿಬಸಮ್ಮ ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕೆ ₹10 ಲಕ್ಷಗಳ ದೇಣಿಗೆಯ ಚೆಕ್ ನೀಡುವ ಮೂಲಕ ರಾಷ್ಟ್ರಪ್ರೇಮ ಹಾಗೂ ಭಾರತೀಯ ವೀರಯೋಧರ ಬಗ್ಗೆ ಅಭಿಮಾನ ಮೆರೆದಿದ್ದಾರೆ.ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ₹10 ಲಕ್ಷ ಮೊತ್ತದ ಚೆಕ್ ಅನ್ನು ನಿವೃತ್ತ ಶಿಕ್ಷಕಿ, ದಯಾ ಮರಣ ಹೋರಾಟಗಾರರಾದ ಕರಿಬಸಮ್ಮ ತಮ್ಮ ಹಳೆಯ ವಿದ್ಯಾರ್ಥಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಇತರರೊಂದಿಗೆ ನೀಡುವ ಮೂಲಕ ದೇಶಪ್ರೇಮಕ್ಕೆ ಸಾಕ್ಷಿಯಾದರು.
ರಾಜ್ಯಾದ್ಯಂತ ತಾವೊಬ್ಬರೇ ದಯಾ ಮರಣಕ್ಕೆ ಹೋರಾಟ ನಡೆಸುವ ಮೂಲಕ ದಯಾಮರಣ ಹೋರಾಟಗಾರ್ತಿ ಕರಿಬಸಮ್ಮ ಅಂತಲೇ ನಿವೃತ್ತ ಶಿಕ್ಷಕಿ ಕರಿಬಸಮ್ಮ ಹೆಸರಾಗಿದ್ದಾರೆ. ತಮ್ಮ ನಿವೃತ್ತಿ ವೇತನ (ಪಿಂಚಣಿ) ಹಾಗೂ ಸ್ವಂತ ಮನೆಯನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ₹10 ಲಕ್ಷಗಳ ಚೆಕ್ ವೀರಯೋಧರ ಸೇವೆ ಸ್ಮರಿಸಿ, ವೀರಯೋಧರ ಕಲ್ಯಾಣಕ್ಕಾಗಿ ದೇಣಿಗೆ ನೀಡಿರುವುದು ಇತರರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅಧಿಕೃತ ನಿಧಿಯಾದ ಭಾರತ್ ಕೆ ವೀರ್ **(Bharat Ke Veer Corpus Fund)**ಗೆ ಈ ಮೊತ್ತವನ್ನು ಅರ್ಪಿಸಲಾಗಿದ್ದು, ₹10 ಲಕ್ಷಗಳ ಚೆಕ್ ಅನ್ನು ಕೇಂದ್ರ ಸರ್ಕಾರದ ನಿಧಿಗೆ ತಲುಪಿಸಲಾಗುವುದು. ಕರಿಬಸಮ್ಮನವರು ದೇಶದ ವೀರಯೋಧರ ಕಲ್ಯಾಣಕ್ಕಾಗಿ ಆರ್ಥಿಕ ನೆರವು ನೀಡಬೇಕೆಂಬ ಸುದೀರ್ಘ ವರ್ಷದ ಗುರಿ ಹೊಂದಿದ್ದರು. ತಮ್ಮ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಜಿಲ್ಲಾಡಳಿತದ ಮೂಲಕ ಚೆಕ್ ಸಲ್ಲಿಸಲು ಬಂದಿದ್ದಾರೆ. ಹಿರಿಯರಾದ ಕರಿಬಸಮ್ಮನವರ ಅಪೇಕ್ಷೆಯಂತೆ ನಿವೃತ್ತ ಶಿಕ್ಷಕರ ದೇಶಪ್ರೇಮ ಹಾಗೂ ಉದಾತ್ತ ಕಾರ್ಯಕ್ಕೆ ಜಿಲ್ಲಾಡಳಿತ ಅಭಿನಂದಿಸುತ್ತದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು.
ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ ಮಾತನಾಡಿ, 5 ದಶಕಗಳ ಹಿಂದೆ ಕೇವಲ ರೇಡಿಯೋಗಳಿದ್ದ ಕಾಲದಲ್ಲಿ ಗಡಿಯಲ್ಲಿ ಕಠಿಣ, ಪ್ರತಿಕೂಲ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿ ಕಾಯುವ ಯೋಧರ ಕಷ್ಟಗಳ ಬಗ್ಗೆ ಕೇಳಿ ಮನ ಸದಾ ನೋಯುತ್ತಿತ್ತು. ತಮ್ಮ ಹೆಂಡತಿ, ಮಕ್ಕಳು, ವಯಸ್ಸಾದ ಹೆತ್ತವರ ಯೋಗಕ್ಷೇಮ ವಿಚಾರಿಸಲು ಕಡಿದಾದ ಬೆಟ್ಟ ಗುಡ್ಡಗಳಿಂದ ಮೈಲುಗಟ್ಟಲೇ ನಡೆದು ಬರುವ ಸೈನಿಕರ ಪರಿಸ್ಥಿತಿ ಮನಸ್ಸನ್ನು ಕಲುಕಿತ್ತು. ಆಗಿನಿಂದಲೇ ದೇಶಕ್ಕಾಗಿ ನಾನೇನಾದರೂ ಸೇವೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೆ. ಅನಂತರ ದಯಾಮರಣ ಹೋರಾಟಕ್ಕೆ ಇಳಿದಾಗ ತಮಗೆ ಹಣದ ಅವಶ್ಯಕತೆ ಎದುರಾಯಿತು ಎಂದರು. ಯಾರಿಂದಲೂ ನಯಾಪೈಸೆ ಪಡೆದಿಲ್ಲ:
ನಿವೃತ್ತ ಶಿಕ್ಷಕಿ ಕರಿಬಸಮ್ಮನವರ ಶಿಷ್ಯರಾದ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಇತರರು ಇದ್ದರು.
(ಬಾಕ್ಸ್) * ಸೈನಿಕರಿಗಾಗಿ ಚೆಕ್ ಸಮರ್ಪಿಸಿದ ಅತ್ಮತೃಪ್ತಿ ನಿರಂತರ ಹೋರಾಟದ ಪರಿಣಾಮವಾಗಿ ನನಗೆ ಬಿಪಿ, ಶುಗರ್, ಪೆಪ್ಟಿಕ್ ಅಲ್ಸರ್, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೆ ತುತ್ತಾಗಿದ್ದೆ. ಅನಾರೋಗ್ಯದ ಏರುಪೇರಿನ ಮಧ್ಯೆಯೂ ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕೆಂಬ ನನ್ನ ಸಂಕಲ್ಪ ಮಾತ್ರ ಈಗಲೂ ಕುಗ್ಗಿಲ್ಲ. ನನ್ನ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ, ಆದಷ್ಟು ಬೇಗನೇ ಈ ಹಣವನ್ನು ದೇಶಕ್ಕೆ ಒಪ್ಪಿಸಿ ಋಣಮುಕ್ತಳಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮುಖಾಂತರ ಸಲ್ಲಿಸಲು ಉದ್ದೇಶಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಹಾಗಾಗಿ, ವೀರಯೋಧರ ಹೆಸರಿಗೆ ಸಂಕಲ್ಪ ಮಾಡಿಟ್ಟದ್ದ ಈ ಹಣವನ್ನು ಬಿಎಸ್ಎಫ್ ನಿಧಿಗೆ ಹಸ್ತಾಂತರಿಸಿದ್ದೇನೆ. ಇಂದಿನ ದಿನ ನನಗೆ ಅಪಾರ ಸಂತೋಷ ತಂದಿದೆ ಎಂದು ನಿವೃತ್ತ ಶಿಕ್ಷಕಿ ಕರಿಬಸಮ್ಮ ಸಂತೃಪ್ತಿಯ ಮಾತುಗಳನ್ನಾಡಿದರು.
-22ಕೆಡಿವಿಜಿ7: ಭಾರತೀಯ ಸೇನೆಯ ಯೋಧರ ಕಲ್ಯಾಣಕ್ಕೆಂದು ದಾವಣಗೆರೆಯಲ್ಲಿ ದಯಾ ಮರಣ ಹೋರಾಟಗಾರ್ತಿ, ನಿವೃತ್ತ ಶಿಕ್ಷಕಿ ಕರಿಬಸಮ್ಮ ₹10 ಲಕ್ಷಗಳ ಚೆಕ್ ಜಿಲ್ಲಾಧಿಕಾರಿ ಮುಖಾಂತರ ಸೇನೆಗೆ ಸಮರ್ಪಿಸಿದರು. ಈ ವೇಳೆ ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಇತರರು ಇದ್ದರು.