ಕನಕಗಿರಿ: ತಾಲೂಕಿನ ಕನಕಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ 16 ವರ್ಷ ಸೇವೆ ಸಲ್ಲಿಸಿ ಈಚೆಗೆ ಕುಷ್ಟಗಿ ತಾಲೂಕಿನ ಹಾಗಲದಾಳ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಹನುಮನಗೌಡ ಅವರಿಗೆ ಶಿಷ್ಯರು 5 ಗ್ರಾಂ ಚಿನ್ನದ ಉಂಗುರ ಉಡುಗೊರೆ ನೀಡಿದ್ದಾರೆ.
ಶಿಕ್ಷಕ ಹನುಮನಗೌಡರ ಸೇವೆ, ನಿಷ್ಠೆಗೆ ಹೆಸರುವಾಸಿಯಾಗಿದ್ದವರು. ಶಾಲೆಗೆ ಬಾರದ ಮಕ್ಕಳನ್ನು ಶಾಲೆಗೆ ಕರೆ ತಂದು ಅಕ್ಷರ ಕಲಿಸಿದರು. ಅವರಿಂದ ಕಲಿತ ಕೆಲವರು ಈಗ ಉನ್ನತ ಹುದ್ದೆಯಲ್ಲಿದ್ದಾರೆ. ಹನುಮನಗೌಡ ಅವರು ಕೇವಲ ಮಕ್ಕಳಿಗೆ ಮಾತ್ರವಲ್ಲ, ಗ್ರಾಮದ ಹಿರಿಯರಿಗೂ ಅಚ್ಚುಮೆಚ್ಚು ಆಗಿದ್ದರು. ಇಂದಿಗೂ ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ನಮ್ಮ ಗುರುಗಳು ತಪ್ಪದೆ ಭಾಗಿಯಾಗುತ್ತಾರೆ. ಅವರು ಅಕ್ಷರದ ಜತೆಗೆ ಜೀವನದ ಪಾಠವನ್ನು ಕಲಿಸಿದ್ದರಿಂದ ಹನುಮಗೌಡ ಗುರುಗಳೆಂದರೆ ನಮಗೆಲ್ಲ ಬಹಳ ಪ್ರೀತಿ. ನಮ್ಮನ್ನು ಅವರ ಮಕ್ಕಳಂತೆ ನೋಡುತ್ತಾರೆ. ಅವರ ವಯೋನಿವೃತ್ತಿಯಾಗಿದ್ದರಿಂದ ಭಾನುವಾರ ಕನಕಾಪುರ ಗ್ರಾಮದ ತುಂಬೆಲ್ಲ ಸಾರೋಟದಲ್ಲಿ ಮೆರವಣಿಗೆ ಮಾಡಿ ಹೂಮಳೆ ಸುರಿಸಲಾಗಿದೆ ಎಂದು ಬಸವನಗೌಡ ತಿಳಿಸಿದರು.
ಈ ವೇಳೆ ಕರೇಗೌಡ ಮಾಲಿ ಪಾಟೀಲ್, ತೊಂಡೆಪ್ಪ ಹುಗ್ಗಿ, ಶಿವರಾಜ ಪಾಟೀಲ್, ಬೀರಪ್ಪ ಜಾಲಿಹಾಳ, ರವಿ ಪಾಟೀಲ್, ಶೇಖರಗೌಡ, ಯಮನೂರಪ್ಪ ಮುರುಡಿ, ದುರುಗಪ್ಪ ಮಾದಿನಾಳ, ನಿಂಗಪ್ಪ ಬೋದೋರು, ಬಸವರಾಜ, ವೀರಭದ್ರಪ್ಪ ಅಗಸಿಮುಂದಿನ, ಶಂಕರ ಜಾಲಿಹಾಳ, ಸೋಮಶೇಖರ ಇತರರಿದ್ದರು.