ಶಿವಾನಂದ ಗೊಂಬಿ
ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಉಪದಾನ ಕೊಟ್ಟು ಪುಣ್ಯಕಟ್ಕೊಳ್ಳಿ..! ಇದು ಏಳನೇ ವೇತನ ಆಯೋಗದ ಅವಧಿಯಲ್ಲೇ ನಿವೃತ್ತಿಯಾದರೂ 6ನೇ ವೇತನ ಆಯೋಗದಂತೆ ನಿವೃತ್ತಿ ಉಪದಾನ ಪಡೆದಿರುವ ರಾಜ್ಯದ 30 ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರ ಒಕ್ಕೊರಲಿನ ಆಗ್ರಹ.
ಇದಕ್ಕಾಗಿ ಇವರು ಮಾಡದ ಹೋರಾಟ ಉಳಿದಿಲ್ಲ. ಕೊಟ್ಟ ಮನವಿಗಳಿಗೆ ಲೆಕ್ಕವಿಲ್ಲ. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸೇರಿದಂತೆ ಹಲವರು ಇವರ ಹೋರಾಟ ಬೆಂಬಲಿಸಿ ಸರ್ಕಾರಕ್ಕೆ ಪತ್ರ ಬರೆದರೂ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ.ಏನಿದು ನಿವೃತ್ತಿ ಉಪದಾನ?
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಬಳಿಕ 2024ರ ಆ.1ರಂದು ಏಳನೇ ವೇತನ ಆಯೋಗ ಜಾರಿಗೊಳಿಸಿತು. ಆದರೆ, ಸೌಲಭ್ಯಗಳು 2022ರ ಜು.1 ರಿಂದಲೇ ಅನ್ವಯವಾಗುವಂತೆ ವೇತನ ಪರಿಷ್ಕರಣೆ (ಕಾಲ್ಪನಿಕ ವೇತನ) ಮಾಡಿತು. ಹೀಗಾಗಿ, ನಿವೃತ್ತರಾದವರಿಗೆ ಪಿಂಚಣಿ, ಹಾಲಿ ಕೆಲಸದಲ್ಲಿರುವ ನೌಕರರಿಗೆ 2022ರಿಂದಲೇ ಅನ್ವಯವಾಗುವಂತೆ ಕಾಲ್ಪನಿಕ ವೇತನ ಬರುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ.
ಆದರೆ, 2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತರಾದವರಿಗೆ ನಿವೃತ್ತಿ ಬಳಿಕ ಬರಬೇಕಾದ ಉಪದಾನಗಳು (ಗಳಿಕೆ ರಜೆ, ಕಮ್ಯುಟೇಷನ್, ಗ್ರ್ಯಾಚುಟಿ) 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ನೀಡಿ ಸರ್ಕಾರ ಕೈತೊಳೆದುಕೊಂಡಿತು. ಒಂದು ವೇಳೆ ಏಳನೇ ವೇತನ ಆಯೋಗದಂತೆ ಇವರಿಗೆ ಉಪದಾನ ಕೊಟ್ಟರೆ ಸರ್ಕಾರಕ್ಕೆ ಸರಿಸುಮಾರು ₹6 ಸಾವಿರ ಕೋಟಿ ಹೊರೆಯಾಗುತ್ತದೆ. ಹೀಗಾಗಿ, ಪಿಂಚಣಿಯನ್ನು 7ನೇ ವೇತನ ಆಯೋಗದಂತೆ, ಉಪದಾನಗಳನ್ನು 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೊಟ್ಟಿದೆ. ಇದರಿಂದಾಗಿ ಈ ಅವಧಿಯಲ್ಲಿ ನಿವೃತ್ತರಾದ 30 ಸಾವಿರಕ್ಕೂ ಅಧಿಕ ನೌಕರರಿಗೆ ಪ್ರತಿಯೊಬ್ಬರಿಗೂ ₹6 ಲಕ್ಷ ದಿಂದ ಹಿಡಿದು ₹22 ಲಕ್ಷಗಳ ವರೆಗೂ ಉಪದಾನಗಳು ಕಡಿಮೆ ಬಂದಿವೆ.
ನಾವು 7ನೇ ವೇತನ ಆಯೋಗದ ಅವಧಿಯಲ್ಲೇ ನಿವೃತ್ತರಾದ ಹಿನ್ನೆಲೆಯಲ್ಲಿ ಉಪದಾನಗಳನ್ನೂ ಅದೇ ಲೆಕ್ಕದಲ್ಲೇ ಕೊಡಿ. 6ನೇ ವೇತನ ಆಯೋಗದಂತೆ ನೀಡಿರುವುದು ನಮಗೆ ಮಾಡಿರುವ ಅನ್ಯಾಯ ಎಂಬುದು ನಿವೃತ್ತ ನೌಕರರ ಆಗ್ರಹ.
30-40 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಜೀವನದ ಇಳಿ ಹೊತ್ತಿನಲ್ಲಿರುವ ನಿವೃತ್ತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಕೊಟ್ಟಿದ್ದೇವೆ. ಡಿಸಿಎಂ, 28 ಸಚಿವರು, ಸಭಾಪತಿ, ಸಭಾಧ್ಯಕ್ಷರೆಲ್ಲರೂ ನಮ್ಮ ಪರವಾಗಿ ಸರ್ಕಾರಕ್ಕೆ ಪತ್ರ ಬರೆದರೂ ಕ್ಯಾರೆ ಎನ್ನುತ್ತಿಲ್ಲ. ಮುಖ್ಯಮಂತ್ರಿಗಳು ಮನವಿ ಕೊಟ್ಟಾಗಲೊಮ್ಮೆ ಪರಿಶೀಲಿಸುತ್ತೇವೆ ಎನ್ನುತ್ತಾರೆಯೇ ಹೊರತು ಕ್ರಮ ಕೈಗೊಳ್ಳುತ್ತಿಲ್ಲ.
----
30-40 ವರ್ಷ ಸರ್ಕಾರಿ ನೌಕರಿ ಮಾಡಿದ ನಮಗೆ ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ಪಿಂಚಣಿ ನೀಡಿ, ನಿವೃತ್ತ ಆರ್ಥಿಕ ಸೌಲಭ್ಯವನ್ನು 6ನೇ ವೇತನ ಆಯೋಗದಂತೆ ನೀಡುವುದು ಎಷ್ಟು ಸರಿ?. ನಮ್ಮ ಸೇವೆಗೆ ಬೆಲೆ ಇಲ್ಲವೇ?.- ವಿಜಯ ಅಣಜಿ, ಸಂಚಾಲಕರು, ಅಖಿಲ ಕರ್ನಾಟಕ ನಿವೃತ್ತ ನೌಕರರ ವೇದಿಕೆ, ಹುಬ್ಬಳ್ಳಿ.